ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ “ಕೆನರಾ ರಿಟೈಲ್ ಮೇಳ-2025” ಅನ್ನು ಇದೇ ಅ.11ಮತ್ತು 12ರಂದು ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಕಚೇರಿಯ ಜನರಲ್ ಮ್ಯಾನೇಜರ್ ಎಚ್.ಕೆ. ಗಂಗಾಧರ್ ತಿಳಿಸಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ದಿನಗಳ ಮೇಳವು ಬೆಳಿಗ್ಗೆ 9.30ರಿಂದ ಸಂಜೆ 6.30ರ ವರೆಗೆ ನಡೆಯಲಿದೆ. ಈ ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪೂರ್ವಪಾವತಿ ಪೆನಾಲ್ಟಿ ಇರುವುದಿಲ್ಲ. ವಾಹನ ಸಾಲಕ್ಕೆ ಕೇವಲ ಶೇ. 10ರಷ್ಟು ಮುಂಗಡ ಪಾವತಿ. ಉಳಿದ ಹಣವನ್ನು ಮಾಸಿಕ 84 ಕಂತುಗಳಲ್ಲಿ ಮರುಪಾವತಿಸಲು ಅವಕಾಶವಿದೆ. ಸಂಸ್ಕರಣಾ ಶುಲ್ಕ ಇರುವುದಿಲ್ಲ. ಜಾಮೀನು ಅಗತ್ಯವಿಲ್ಲ. ಗೃಹ ಸಾಲಕ್ಕೆ 30ವರ್ಷಗಳವರೆಗೆ ಗರಿಷ್ಠ ಮರುಪಾವತಿ ಅವಕಾಶವಿದೆ. ಸ್ಥಳದಲ್ಲೇ ಸಾಲದ ಮಂಜೂರಾತಿ ಪಡೆಯಲು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮೂರು ವರ್ಷದ ಐಟಿ ರಿಟರ್ನ್, ಆರು ತಿಂಗಳ ಸಂಬಳ ಚೀಟಿ ತರಬೇಕು ಎಂದರು.
ಅ.11ರಂದು ಶಾಸಕ ಯಶ್ ಪಾಲ್ ಸುವರ್ಣ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಎಸ್ಪಿ ಹರಿರಾಮ್ ಶಂಕರ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯದ ಪ್ರತಿಷ್ಠಿತ ಬಿಲ್ಡರ್ಸ್ ಹಾಗೂ ವಿವಿಧ ಕಂಪೆನಿಯ ಮಳಿಗೆಗಳು ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಜಿಎಂ ಮಹಾಮಯ ಪ್ರಸಾದ್, ಡಿಎಂ ಅರ್ಚನಾ, ಡಿಎಂ ಕೌಶಿಕ್ ರೆಡ್ಡಿ, ಸಿನಿಯರ್ ಮ್ಯಾನೇಜರ್ ಗಳಾದ ಸೂರಜ್ ಆರ್. ಉಪ್ಪೂರು ಮತ್ತು ದುರ್ಗಾ ಪ್ರಸಾದ್ ಇದ್ದರು.


















