ಬ್ರಹ್ಮಾವರ: ಅ.11- 12ರಂದು “ಕೃಷಿ ಮೇಳ-2025”

ಉಡುಪಿ: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಗಳಾದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇದೇ ಅ.11 ಮತ್ತು 12ರಂದು ಎರಡು ದಿನಗಳ “ಕೃಷಿ ಮೇಳ-2025″ ಕಾರ್ಯಕ್ರಮವನ್ನು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಡಿಪ್ಲೋಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕೆ.ವಿ. ಸುಧೀರ್ ಕಾಮತ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ.11ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದರು.

ಸಹ ಸಂಶೋಧನಾ ನಿರ್ದೇಶಕ ಡಾ. ಧನಂಜಯ ಬಿ. ಮಾತನಾಡಿ, ಮೊದಲನೇ ದಿನ ಮಧ್ಯಾಹ್ನ 2ಗಂಟೆಗೆ “ತೋಟಗಾರಿಕೆ ಬೆಳೆಗಳ ಲಾಭದಾಯಕ ನಿರ್ವಹಣೆ” ವಿಷಯದ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಎರಡನೇ ದಿನದಂದು ಬೆಳಿಗ್ಗೆ 10.30ಕ್ಕೆ “ಗೇರು ಬೆಳೆ ವಿಚಾರ ಸಂಕಿರಣ” ಮತ್ತು “ಕರಾವಳಿಗೆ ಭವಿಷ್ಯದ ಬೆಳೆಗಳು ಮತ್ತು ತಾಂತ್ರಿಕತೆಗಳು” ಮತ್ತು “ಕರಾವಳಿಯಲ್ಲಿ ಸುಸ್ಥಿರ ಭತ್ತದ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳು” ವಿಷಯದ ಕುರಿತ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ.

ಕೃಷಿಮೇಳದಲ್ಲಿ ಸುಮಾರು 200 ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ಇಲಾಖೆ, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಅಭಿವೃದ್ಧಿ ಪಡಿಸಿರುವ ಕೃಷಿ ತಂತ್ರಜ್ಞಾನಗಳ ಮತ್ತು ಕೃಷಿ ಪರಿಕರಗಳ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಈ ಕೃಷಿಮೇಳದಲ್ಲಿ ಕರಾವಳಿ ಮತ್ತು ಇತರೇ ಜಿಲ್ಲೆಗಳಿಂದ ಸುಮಾರು 2 ಲಕ್ಷ ರೈತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಕ್ಷೇತ್ರಾಧೀಕ್ಷಕ ಡಾ. ಶಂಕರ ಎಂ ಉಪಸ್ಥಿತರಿದ್ದರು.