ಉಡುಪಿ: ಮಣಿಪಾಲ ಮಾಹೆಯ ವಿದ್ಯಾರ್ಥಿಗಳ ವ್ಯವಹಾರ ವಿಭಾಗ, ಕೆಎಂಸಿಯ ವಿದ್ಯಾರ್ಥಿ ಕ್ರೀಡಾ ಸಮಿತಿ ಹಾಗೂ ಎಫ್ಐಟಿವಿಐಬಿ ಎಕ್ಸ್ ಸ್ಫೋರ್ಟ್ಸ್ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ “ಮಾನಸಿಕ ಆರೋಗ್ಯ ಜಾಗೃತಿ ಓಟ”ವನ್ನು ಇದೇ ಅ.11ರಂದು ಮಣಿಪಾಲ ಮಾಹೆ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ ಎಂದು ಮಾಹೆಯ ವಿದ್ಯಾರ್ಥಿಗಳ ವ್ಯವಹಾರ ವಿಭಾಗದ ಮುಖ್ಯಸ್ಥೆ ಗೀತಾ ಮಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ 5 ಕಿ.ಮೀ ಜಾಗೃತಿ ಓಟವು ಅ.11ರಂದು ಸಂಜೆ 5ಗಂಟೆಗೆ ಮಣಿಪಾಲ ಮಾಹೆ ಕ್ಯಾಂಪಸ್ ನಲ್ಲಿ ಆರಂಭಗೊಳ್ಳಲಿದೆ. ಇದರಲ್ಲಿ 1 ಸಾವಿರಕ್ಕೂ ಅಧಿಕ ಮಾಹೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಮಣಿಪಾಲ ಸಮೀಪದ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ವಿಶೇಷ ಚೇತನ ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಎಲ್ಲ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವವರಿಗೆ ಕ್ರಮವಾಗಿ 5 ಸಾವಿರ, 3 ಸಾವಿರ ಮತ್ತು 2 ಸಾವಿರ ನಗದು ಬಹುಮಾನ ನೀಡಲಾಗುವುದು. ಓಟವನ್ನು ಪೂರ್ಣಗೊಳಿಸಿದ ಎಲ್ಲರಿಗೂ ಪದಕವನ್ನು ನೀಡಲಾಗುವುದು. ನೋಂದಣಿ ಮಾಡುವ ಎಲ್ಲರಿಗೂ ಟೀ ಶರ್ಟ್ ನೀಡಲಾಗುವುದು. ಅಲ್ಲದೆ ಮಾಹೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಜಾಗೃತಿ ಓಟದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ಮರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.


















