ಉಡುಪಿ: ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಾರಂತ ಜನ್ಮದಿನೋತ್ಸವ- ಸಾಹಿತ್ಯೋತ್ಸವ ಮತ್ತು ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ- 2025 ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಇದೇ ಅ.11ರಂದು ಸಂಜೆ 4ಗಂಟೆಗೆ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾಂಸ ಡಾ. ಬಿ.ಎ. ವಿವೇಕ ರೈ ಅವರಿಗೆ ಟ್ರಸ್ಟಿನ ಮೊದಲ ಡಾ. ಶಿವರಾಮ ಕಾರಂತ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರದಾನ ಮಾಡಲಿದ್ದಾರೆ. ಹಿರಿಯ ಜಾನಪದ ವಿದ್ವಾಂಸ ಎಸ್.ಎ ಕೃಷ್ಣಯ್ಯ, ಹಿರಿಯ ಸಂಶೋಧಕಿ ಡಾ. ರೇಖಾ ಬನ್ನಾಡಿ, ಯಕ್ಷಗಾನ ಕಲಾವಿದ ಶೇಕ್ ಮಹಮ್ಮದ್ ಗೌಸ್ ಅವರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು. ಕನ್ನಡ ಹಿರಿಯ ವಿಮರ್ಶಕರಾದ ಡಾ.ಎಸ್.ಆರ್ ವಿಜಯಶಂಕರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಬಳಿಕ ಡಾ. ಕಾರಂತರ “ಮೈಮನಗಳ ಸುಳಿಯಲ್ಲಿ” ಕಾದಂಬರಿ ಆಧಾರಿತ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಅಲ್ಲದೆ, ಅಕ್ಟೋಬರ್ 12ರಂದು ಸಂಜೆ 4 ಗಂಟೆಗೆ ಕಾರ್ಕಳದ ರಂಗಾಯಣದಲ್ಲಿ ಉಪನ್ಯಾಸ ಮತ್ತು ಕಾರಂತ ರಂಗ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ, ಸದಸ್ಯರಾದ ಜಿಎಂ ಶರೀಫ್ ಹೂಡೆ, ಸತೀಶ್ ಕೊಡವೂರು, ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಾಮಣ ಐತಾಳ್ ಇದ್ದರು.


















