ಉಡುಪಿ: ಯಕ್ಷಗಾನ ಸಂಘಟನೆಯೊoದು ದಶಮಾನೋತ್ಸವವನ್ನು ಪೂರೈಸುತ್ತಿರುವುದು ಅಭಿಮಾನದ ಸಂಗತಿ. ಇಂದು ಮಹಿಳಾ ಯಕ್ಷಗಾನ ಸಂಘಟನೆಗಳು, ಮಕ್ಕಳ ಯಕ್ಷಗಾನ ಮೇಳ ಸೇರಿದಂತೆ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿವೆ. ಈ ಸಂಘಟನೆಗಳಿoದಾಗಿಯೇ ಯಕ್ಷಗಾನ ಕಲೆಯ ಭವಿಷ್ಯ ಭದ್ರವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಸುರತ್ಕಲ್‌ನ ವಿದ್ಯಾದಾಯಿನಿ ಪ್ರೌಢಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ಅ.4 ರಂದು (ಶನಿವಾರ) ನಡೆದ ಯಕ್ಷ ಅಭಿಮಾನಿ ಬಳಗ ಟ್ರಸ್ಟ್ ಸುರತ್ಕಲ್ ಇದರ ದಶಮಾನೋತ್ಸವ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕಲೆಯ ಭವಿಷ್ಯದ ಬಗ್ಗೆ ಚಿಂತೆಬೇಡ. ಹೆಣ್ಣು ಮಗಳೊಬ್ಬಳು ಯಕ್ಷಗಾನ ಕಲಿತರೆ ಇಡೀ ಕುಟುಂಬವೇ ಯಕ್ಷಗಾನ ಕಲಿತ ಹಾಗೆ. ಹೀಗಾಗಿ ಯಕ್ಷಗಾನ ಅಕಾಡೆಮಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತರಬೇತಿ, ಪ್ರದರ್ಶನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹೆತ್ತವರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಯಲು ಪ್ರೋತ್ಸಾಹಿಸಬೇಕು. ಮಹಿಳೆಯರು ಕೂಡಾ ಯಕ್ಷಗಾನ ಕಲಿಯಲು ಮುಂದಾಗಬೇಕು. ನಮ್ಮ ಪುರಾಣದ ಪ್ರಸಂಗಗಳು ಕೇವಲ ಮನೋರಂಜನೆಗಾಗಿ ಅಲ್ಲ, ಅವುಗಳು ಬೋಧಿಸುವ ನೈತಿಕ ಮೌಲ್ಯಗಳು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ದಾರಿದೀಪಗಳಾಗಿವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಟೀಲು ದೇವಳದ ಅನುವಂಶಿಕ ಅರ್ಚಕ ವೇದಮೂರ್ತಿ ವೆಂಕಟರಮಣ ಅಸ್ರಣ್ಣ ಶುಭಾಶಂಸನೆಗೈದರು.
ಸಭಾಧ್ಯಕ್ಷತೆಯನ್ನು ಅಗರಿ ಎಂಟರ್‌ಪ್ರೈಸಸ್‌ನ ಮಾಲಕ ಅಗರಿ ರಾಘವೇಂದ್ರ ರಾವ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರೀ ಹಿರಿಯ ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರೀ, ಹಿರಿಯ ವೇಷಧಾರಿ ರಮೇಶ್ ಭಟ್ ಬಾಯಾರು, ಹಿರಿಯ ಪ್ರಸಂಗಕರ್ತ ಮಾಧವ ಭಂಡಾರಿ ಕುಳಾಯಿ ಹಾಗೂ ನಿವೃತ್ತ ಕಲಾವಿದ ಮನೋಜ್ ಕುಮಾರ್ ಕಿನ್ನಿಗೋಳಿ ಅವರಿಗೆ ಗೌರವಾರ್ಪಣೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ರವೀಂದ್ರ ಶೇಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಯಚಂದ್ರ ಹತ್ವಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಜೇಶ್ ಕುಳಾಯಿ ಉಪಸ್ಥಿತರಿದ್ದರು.
ಡಾ.ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಅವರು ಅಭಿನಂದನಾ ಭಾಷಣ ಮಾಡಿ, ಕಾರ್ಯಕ್ರಮ ನಿರೂಪಿಸಿದರು.


















