ಉಡುಪಿ:ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲ್ಲೂಕುಗಳಲ್ಲಿ ಬಸ್ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮೀಣ ಪ್ರದೇಶಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಹಂಚು ಕಾರ್ಮಿಕರ ಸಂಘದ ಅಧ್ಯಕ್ಷ ಎಚ್. ನರಸಿಂಹ ಮಾತನಾಡಿ, ಖಾಸಗಿ ಬಸ್ಗಳು ಮುಖ್ಯ ರಸ್ತೆಯ ಲ್ಲಷ್ಟೇ ಸಂಚಾರ ಮಾಡುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಬಸ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ದುಡಿಮೆಗೆ ಹೋಗುವ ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗಿದೆ ಎಂದರು.
ಕುಂದಾಪುರ, ತ್ರಾಸಿ, ಆನಗೋಡು, ಮೊವಾಡಿ, ನಾಡ, ಪಡುಕೋಣೆ, ಕೋಣ್ಕಿ, ಬಡಾಕೆರೆ ಮಾರ್ಗವಾಗಿ ಒಂದು ವರ್ಷದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ನಡೆಸುತ್ತಿತ್ತು. ಆದರೆ ಕಳೆದ ಏಪ್ರಿಲ್ ತಿಂಗಳಿಂದ ಕೋರ್ಟ್ ಆದೇಶದಂತೆ ಬಸ್ ಸಂಚಾರ ನಿಲುಗಡೆಯಾಗಿದೆ. ಈ ಮಾರ್ಗದಲ್ಲಿ ಮತ್ತೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಳಿಕ ಧರಣಿ ನಿರತರು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಇದೇ 15ರಂದು ಸಾರಿಗೆ ಪ್ರಾಧಿಕಾರದ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಬಳಿಕ ಧರಣಿ ನಿಲ್ಲಿಸಲಾಯಿತು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ. ನಾಯಕ್, ಕೆ.ಎಸ್.ಆರ್.ಟಿ.ಸಿ. ಕುಂದಾಪುರ ಡಿಪೊ ಮ್ಯಾನೇಜರ್ ಉದಯ್ ಶೆಟ್ಟಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಧರಣಿಯಲ್ಲಿ ಮುಖಂಡರಾದ ಸುರೇಶ್ ಕಲ್ಲಾಗಾರ, ಕವಿರಾಜ್ ಎಸ್. ಕಾಂಚನ್, ಚಂದ್ರಶೇಖರ ವಿ., ನಾಗರತ್ನಾ ನಾಡ, ನಾಗರತ್ನ ಪಡುವರಿ, ಶೋಭಾ, ಸಂಜೀವ ಬಳ್ಕೂರು ಉಪಸ್ಥಿತರಿದ್ದರು.


















