ಅ.26 ರಿಂದ ಭಾರತ-ಚೀನಾ ನೇರ ವಿಮಾನಯಾನ ಪುನರಾರಂಭ; ವಿಮಾನ ಹಾರಾಟಕ್ಕೆ ಎರಡೂ ದೇಶಗಳು ಒಪ್ಪಿಗೆ.

ನವದೆಹಲಿ: ಭಾರತ ಮತ್ತು ಚೀನಾ ಮಧ್ಯೆ 5 ವರ್ಷದ ಬಳಿಕ ನೇರ ವಿಮಾನ ಸೇವೆ ಅಕ್ಟೋಬರ್ 26 ರಿಂದ ಆರಂಭಗೊಳ್ಳಲಿದೆ. ನಾಗರಿಕ ವಿಮಾನಯಾನ ಅಧಿಕಾರಿಗಳ ನಡುವಿನ ನಿರಂತರ ಚರ್ಚೆಗಳ ನಂತರ ಈ ತಿಂಗಳ ಅಂತ್ಯದ ವೇಳೆಗೆ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ.

ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಮಹತ್ವದ ಸಭೆಯ ಬಳಿಕ ವಿಮಾನ ಹಾರಾಟಕ್ಕೆ ಎರಡೂ ದೇಶಗಳು ಒಪ್ಪಿಗೆ ನೀಡಿವೆ.

ಅಕ್ಟೋಬರ್‌ 26 ರಿಂದ ಕೋಲ್ಕತ್ತಾದಿಂದ ಗುವಾಂಗ್‌ಝೌಗೆ ಪ್ರತಿನಿತ್ಯ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ. ಮೂಲಗಳ ಪ್ರಕಾರ ಏರ್ ಇಂಡಿಯಾ ವರ್ಷಾಂತ್ಯದ ವೇಳೆಗೆ ಚೀನಾಕ್ಕೆ ತನ್ನ ವಿಮಾನ ಸೇವೆಗಳನ್ನು ಪುನರಾರಂಭಿಸುವ ಸಾಧ್ಯತೆಯಿದೆ. ಕೋವಿಡ್ -19 ಸಾಂಕ್ರಾಮಿಕ ರೋಗ ಬಂದ ನಂತರ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಮತ್ತೇ ಆರಂಭಗೊಂಡಿರಲಿಲ್ಲ.

ಇಂಡಿಗೋ ವಿಮಾನಯಾನ ಸಂಸ್ಥೆ ಅಕ್ಟೋಬರ್ 26 ರಂದು ದೆಹಲಿ ಮತ್ತು ಕೋಲ್ಕತ್ತಾದಿಂದ ಗುವಾಂಗ್‌ಝೌಗೆ ದೈನಂದಿನ ವಿಮಾನಗಳನ್ನು ಪ್ರಾರಂಭಿಸಲಿದೆ, ಆದರೆ ಫೆಬ್ರವರಿ 2020 ರಲ್ಲಿ ಕೊನೆಯದಾಗಿ ಚೀನಾಕ್ಕೆ ಹಾರಾಟ ನಡೆಸಿದ ಏರ್ ಇಂಡಿಯಾ, ವರ್ಷಾಂತ್ಯದ ವೇಳೆಗೆ ತನ್ನ ದೆಹಲಿ-ಶಾಂಘೈ ಸೇವೆಯನ್ನು ಪುನರಾರಂಭಿಸಲು ಯೋಜಿಸಿದೆ.