ಉಡುಪಿ: ನವರಾತ್ರಿಯ ಸಮಯದಲ್ಲಿ ಆಯ್ದ ಕೆಲವು ಕಲಾಸಕ್ತರ ಮನೆಗಳಿಗೆ ಬಂದು ಹರಸುವ ಹೂವಿನಕೋಲು ಕಲೆಗೆ ನೂರಾರು ವರ್ಷಗಳ ಇತಿಹಾಸ, ಪರಂಪರೆ ಇದೆ.
ಹೂವಿನಕೋಲು ಕಲೆಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜನಪದೀಯ ನಂಟಿರುವುದು ವಿಶೇಷವಾಗಿದೆ. ಮಕ್ಕಳಲ್ಲಿ ಮಾತುಗಾರಿಕೆ ಹಾಗೂ ಧಾರ್ಮಿಕ ಮತ್ತು ಪುರಾಣದ ಪರಿಕಲ್ಪನೆ ಅರಳಲು ಇದು ಸೂಕ್ತ ವೇದಿಕೆಯಾಗಿದೆ.
ಯಕ್ಷಗಾನ ಮೇಳಗಳು ಸಾಧಾರಣವಾಗಿ ನವೆಂಬರ್ ತಿಂಗಳಿನಲ್ಲಿ ಆರಂಭಗೊಳ್ಳುತ್ತದೆ. ಅದಕ್ಕೂ ಮುಂಚೆ ನವರಾತ್ರಿಯ ದಿನಗಳಲ್ಲಿ ಹೂವಿನಕೋಲು ಎನ್ನುವ ಕಾರ್ಯಕ್ರಮವನ್ನು ಮನೆ ಮನೆಗೂ ಹೋಗಿ ನಡೆಸಿಕೊಡುತ್ತಾರೆ. ಹೂವಿನಕೋಲು ಪ್ರಕಾರದಲ್ಲಿ ಮಕ್ಕಳು ಪಾಲ್ಗೊಳ್ಳುತ್ತಾರೆ.
ಹಾಗೆ ವೃತ್ತಿ ತಿರುಗಾಟದ ಹಿಮ್ಮೇಳ ಕಲಾವಿದರಿಗೆ ಒಂದು ಪೂರ್ವ ತಯಾರಿಯ ರೀತಿಯಲ್ಲಿ ಇಲ್ಲಿ ಗಮನಿಸಬಹುದು.
ಹೂವಿನಕೋಲು ತಂಡದಲ್ಲಿ ಭಾಗವತರು, ಮದ್ದಳೆಗಾರರು, ಶ್ರುತಿವಾದಕರು ಮತ್ತು ಇಬ್ಬರು ಮಕ್ಕಳು ಇರುತ್ತಾರೆ. ಚೆಂಡೆಯ ಬಳಕೆ ಇರುವುದಿಲ್ಲ. ಇಬ್ಬರು ಮಕ್ಕಳು ಆಲಂಕಾರಿಕ ವಸ್ತುಗಳನ್ನು ಮುಂದಿಟ್ಟುಕೊಂಡು ಪರಸ್ಪರ ಅಭಿಮುಖವಾಗಿ ಕುಳಿತುಕೊಳ್ಳುತ್ತಾರೆ. ಇತ್ತೀಚೆಗೆ ಹೂವಿನಕೋಲು ಕಲೆ ನಶಿಸುತ್ತಿದ್ದು, ಬೆರಳೆಣಿಕೆಯಷ್ಟು ತಂಡಗಳು ಮಾತ್ರ ಕಲಾ ಪ್ರದರ್ಶನ ನೀಡುತ್ತಿವೆ.


















