ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ 57 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
57 ಹೊಸ ಕೇಂದ್ರೀಯ ವಿದ್ಯಾಲಯಗಳಿಗೆ ಒಪ್ಪಿಗೆ :
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ, 2026-27ರಿಂದ 9 ವರ್ಷಗಳ ಅವಧಿಯಲ್ಲಿ 5862.55 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಟ್ಟು 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಒಪ್ಪಿಗೆ ಸೂಚಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯತೆ ಪೂರೈಸಲು ಬದ್ಧವಾಗಿ ಕೇಂದ್ರ ಸರ್ಕಾರ ಈ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ನೂತನ ವಿದ್ಯಾಲಯಗಳನ್ನು ತೆರೆಯಲು 585.52 ಕೋಟಿ ಬಂಡವಾಳ ವೆಚ್ಚ ಮತ್ತು 3277.03 ಕೋಟಿ ಕಾರ್ಯಾಚರಣೆ ವೆಚ್ಚವನ್ನು ಅಂದಾಜಿಸಿದೆ.
ಗುಣಮಟ್ಟದ ಶೈಕ್ಷಣಿಕ ಸೌಲಭ್ಯ:
ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಮಾದರಿ ಶಾಲೆಗಳಾಗಿ ಮೊದಲ ಬಾರಿಗೆ ಈ 57 ಕೇಂದ್ರೀಯ ವಿದ್ಯಾಲಯಗಳನ್ನು ಬಾಲವಟಿಕಾಗಳೊಂದಿಗೆ ಮಂಜೂರು ಮಾಡಲಾಗಿದೆ. ಈ ಮೂಲಕ ರಕ್ಷಣಾ ಮತ್ತು ಅರೆಸೈನಿಕ ಪಡೆಗಳು ಸೇರಿದಂತೆ ಕೇಂದ್ರ ಸರ್ಕಾರದ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ದೇಶಾದ್ಯಂತ ಏಕರೂಪದ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ.
ಮಾಸ್ಕೋ, ಕಠ್ಮಂಡು ಮತ್ತು ಟೆಹ್ರಾನ್ ಸೇರಿದಂತೆ 3 ವಿದೇಶಗಳಲ್ಲಿ ಸಹ ಒಟ್ಟು 1,288 ಕ್ರಿಯಾತ್ಮಕ ಕೇಂದ್ರೀಯ ವಿದ್ಯಾಲಯಗಳಿದ್ದು, 2025ರ ಜೂನ್ ಅಂತ್ಯದ ವೇಳೆಗೆ ಅಂದಾಜು 13.62 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ 85 ಕೇಂದ್ರೀಯ ವಿದ್ಯಾಲಯಗಳನ್ನು ನೀಡಿತ್ತು. ಇದೀಗ ಹೆಚ್ಚಿನ ಬೇಡಿಕೆ, ಪ್ರಸ್ತಾವನೆಗಳಿರುವುದರಿಂದ ಮತ್ತೆ 57 ಹೆಚ್ಚುವರಿ ವಿದ್ಯಾಲಯಗಳನ್ನು ಮಂಜೂರು ಮಾಡಿದೆ ಎಂದಿದ್ದಾರೆ.
17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಗೂ ಕೆ.ವಿ.ಗಳಿಲ್ಲದ 20 ಜಿಲ್ಲೆಗಳಲ್ಲಿ ತೆರೆಯಲು ಪ್ರಸ್ತಾಪಿಸಲಾಗಿದೆ. ಇದಲ್ಲದೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 14 ಕೆ.ವಿ.ಗಳನ್ನು, ಎಲ್‌ಡಬ್ಲ್ಯೂಇ ಜಿಲ್ಲೆಗಳಲ್ಲಿ 4 ಕೆ.ವಿ.ಗಳು ಮತ್ತು ಎನ್‌ಇಆರ್/ಗುಡ್ಡಗಾಡು ಪ್ರದೇಶಗಳಲ್ಲಿ 5 ಕೆ.ವಿ.ಗಳನ್ನು ತೆರೆಯಲಾಗುತ್ತಿದೆ. ಕಳೆದ ಬಾರಿ ನೀಡದ ರಾಜ್ಯಗಳಿಗೆ ಈ ಸಲ ಆದ್ಯತೆ ನೀಡಲಾಗಿದೆ ಎಂದು ಸಚಿವ ಜೋಶಿ ಹೇಳಿದ್ದಾರೆ.
ದೇಶಾದ್ಯಂತ 86,640 ವಿದ್ಯಾರ್ಥಿಗಳಿಗೆ ಪ್ರಯೋಜನ:
ಕೇಂದ್ರೀಯ ವಿದ್ಯಾಲಯಗಳನ್ನು ತೆರಿದಿರುವುದರಿಂದ ದೇಶಾದ್ಯಂತ 86,640 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಾರೆ. (ಬಾಲವಟಿಕದಿಂದ 12ನೇ ತರಗತಿವರೆಗೆ) 81 ಜನಕ್ಕೆ ಉದ್ಯೋಗ ಸಹ ಒದಗಿಸುತ್ತದೆ ಅಲ್ಲದೇ, 57 ಹೊಸ ಕೆ.ವಿ.ಗಳ ಅನುಮೋದನೆಯಿಂದ ಒಟ್ಟು 4617 ನೇರ ಶಾಶ್ವತ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದಿದ್ದಾರೆ.


















