ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬಿಜೆಪಿ ವಿರೋಧ ಮಾಡಿಲ್ಲ. ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ಸಂಪುಟದ ಸದಸ್ಯರಿಂದ ಅದನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ವಿ.ಸುನಿಲ್‌ಕುಮಾರ್ ಟೀಕಿಸಿದ್ದಾರೆ. ಸಹೋದ್ಯೋಗಿಗಳೇ ಗಣತಿಗೆ ವಿರೋಧಿಸಿದರು ಎಂಬ ಕಾರಣಕ್ಕೆ ನೀವು ಸಂಪುಟ ಸಭೆಯಲ್ಲೇ ಖಿನ್ನರಾಗಿದ್ದು, ಗದ್ಗದಿತರಾಗಿದ್ದು ಸುಳ್ಳೇ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ಪ್ರಶ್ನಿಸಿದರು.
ನನ್ನನ್ನು ಜಾತಿವಾದಿ ಎಂದು ಬಿಂಬಿಸುತ್ತಿದ್ದರೂ ನೀವೆಲ್ಲ ಸುಮ್ಮನೆ ಇದ್ದಿದ್ದೇಕೆ ಎಂದು ಸಂಪುಟದಲ್ಲಿ ಪ್ರಶ್ನಿಸಿದ್ದು ಸುಳ್ಳೇ? ಸಂಪುಟ ಸಭೆ ಮುಗಿದ ತಕ್ಷಣವೇ ಹಿರಿಯ ಸಚಿವರು ತುರ್ತುಸಭೆ ನಡೆಸಿದ್ದು, ನೀವು ತಡ ರಾತ್ರಿ ಸಂಪುಟ ಸದಸ್ಯರ ಜತೆಗೆ ಸಭೆ ನಡೆಸಿದ್ದು ಸುಳ್ಳೇ? ಮರು ದಿನ ಬೆಳಗ್ಗೆ ಮತ್ತೆ ಹಿರಿಯ ಸಚಿವರ ಸಭೆ ನಡೆಸಿ ಸಮೀಕ್ಷೆಯ ದಿನ ಬದಲಾಯಿಸಲಾರೆ ಸಹಕರಿಸಿ ಎಂದು ಬಿನ್ನವಿಸಿದ್ದು ಸುಳ್ಳೇ’ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯವರೇ ಜಾತಿ ಗಣತಿಗೆ ಈ ಬಾರಿಯೂ ವಿರೋಧ ಬಂದಿದ್ದು ನಿಮ್ಮ ಮಗ್ಗುಲಲ್ಲಿ. ಗಣತಿ ಮುಂದೂಡಿ ಎಂಬ ಕೂಗೆದ್ದಿದ್ದು ನಿಮ್ಮ ಕಣ್ಣಳತೆಯಲ್ಲಿರುವ ಸಂಪುಟದಲ್ಲಿ. ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದೂ ನಿಮ್ಮ ಪಕ್ಷದವರೇ ಎಂದು ಟೀಕಿಸಿದರು.
ಸಬ್ ಕಾ ಸಾತ್ ಸಬ್ ಕಾ ವಿಕಾಸ್‌ಗಿಂತ ಸಿದ್ದರಾಮಯ್ಯ ಸಾತ್ ಸಿದ್ದರಾಮಯ್ಯ ವಿಕಾಸ್ ಗಾಗಿ ಸಮೀಕ್ಷೆ ನಡೆಯುತ್ತಿದೆ. ಅಧಿಕಾರಾವಧಿಯ ವಾರಂಟಿ ವಿಸ್ತರಣೆಗಾಗಿ ಸಾಮಾಜಿಕ ಪ್ರಕ್ಷುಬ್ಧತೆ ಸೃಷ್ಟಿಸಬೇಡಿ ಎಂದು ಸುನಿಲ್ ಹೇಳಿದರು.
ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವೈಯಕ್ತಿಕವಾದುದು. ಸಮೀಕ್ಷೆಗೆ ಯಾವ ನಿಗಮಗಳ ಹಣ ಬಳಕೆ ಮಾಡುತ್ತಿದ್ದೀರಿ ಎಂಬುದನ್ನು ನಾಳೆ ನಾವು ಹೇಳುತ್ತೇವೆ. ಸಮೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಕಾರಣಕ್ಕೆ ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗುತ್ತಿದೆ. ಸಸ್ಪೆಂಡ್ ಮಾಡಬೇಕಾಗಿರುವುದು ಶಿಕ್ಷಕರನ್ನಲ್ಲ, ಮುಖ್ಯಮಂತ್ರಿ ಅವರನ್ನು’ ಎಂದು ಹೇಳಿದರು.


















