ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಉಡುಪಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಸಹಯೋಗದಲ್ಲಿ ಅ. 14ರಿಂದ 20ರ ವರೆಗೆ ಕೃಷ್ಣಮಠದ ಮಧ್ವಮಂಟಪದಲ್ಲಿ ತುಳಸೀ ಸಂಕೀರ್ತನಾ ಸಪ್ತಾಹ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಉಡುಪಿ ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಅಧ್ಯಕ್ಷ ಕೆ. ಅರವಿಂದ ಆಚಾರ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಕೀರ್ತನಾ ಸಪ್ತಾಹ ಸ್ಪರ್ಧೆಯಲ್ಲಿ ಒಟ್ಟು 25 ತಂಡಗಳು ಭಾಗವಹಿಸಲಿವೆ. ಪ್ರತಿ ತಂಡಕ್ಕೂ ಅರ್ಧ ಗಂಟೆಗಳ ಕಾಲ ಸಂಕೀರ್ತನಾ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿದೆ. ಪುರುಷ, ಮಹಿಳೆ ಹಾಗೂ ಮಕ್ಕಳ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಿದ್ದು, ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 5 ಸಾವಿರ, 3 ಸಾವಿರ, 2 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿ ತಂಡದಲ್ಲಿ ಕನಿಷ್ಠ 10 ಮಂದಿ ಇರಬೇಕು. ಕಡ್ಡಾಯವಾಗಿ ಸಂಪ್ರದಾಯಿಕ ಸಮವಸ್ತ್ರ ಧರಿಸುವಂತೆ ಸೂಚಿಸಲಾಗಿದೆ. ಅ. 14ರಂದು ಮಧ್ಯಾಹ್ನ 3.30ಕ್ಕೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಸ್ಪರ್ಧೆಗೆ ಚಾಲನೆ ನೀಡುವರು. ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ವಿದ್ಯಾರಾಜೇಶ್ವರ ಸ್ವಾಮೀಜಿ ಉಪಸ್ಥಿತರಿರುವರು. ಅ. 20ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಮಾಧ್ವ ಬ್ರಾಹ್ಮಣ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಕೆ. ರವಿಪ್ರಕಾಶ್ ಭಟ್, ಉಪಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ, ಉದ್ಯಮಿ ರಂಜನ್ ಕಲ್ಕೂರ, ಕೆ. ಕೃಷ್ಣಮೂರ್ತಿ ರಾವ್ ಇದ್ದರು.
				 
								 
															





 
															 
															 
															











