ಜಾನುವಾರುಗಳಿಗೆ ಐಬಿಆರ್ ಲಸಿಕೆ: ಭಾರತದಲ್ಲಿ ಮೊದಲ ಪ್ರಯೋಗ

ಹೈದರಾಬಾದ್: ಹೈದರಾಬಾದ್‌ನ ಲಸಿಕೆ ತಯಾರಿಕಾ ಕಂಪನಿ ‘ಇಂಡಿಯನ್‌ ಇಮ್ಯುನೊಲಾಜಿಕಲ್ಸ್‌ ಲಿಮಿಟೆಡ್‌’ (ಐಐಎಲ್‌) ಸೋಂಕಿತ ಜಾನುವಾರುಗಳ ಮೂಗು ಮತ್ತು ಗಂಟಲಿನ ಉರಿಯೂತ (ಐಬಿಆರ್‌) ಕಾಯಿಲೆಗೆ ಭಾರತದ ಮೊದಲ ಲಸಿಕೆ ‘ಜೀನ್‌ ಡಿಲೀಟೆಡ್‌ ದಿವಾ’ ಅಭಿವೃದ್ಧಿಪಡಿಸಿ ಸೋಮವಾರ ಬಿಡುಗಡೆ ಮಾಡಿದೆ.

ಈ ಲಸಿಕೆಯು ಸೋಂಕಿತ ಜಾನುವಾರುಗಳಿಂದ ಇತರ ಜಾನುವಾರುಗಳನ್ನು ರಕ್ಷಿಸುತ್ತದೆ. ಭಾರತದಲ್ಲಿ ಐಬಿಆರ್‌ ಸಾಂಕ್ರಾಮಿಕ ರೋಗವಾಗಿದ್ದು, ಗಾಳಿಯ ಮೂಲಕ ಹರಡುತ್ತದೆ ಮತ್ತು ಜಾನುವಾರುಗಳ ಸಂತಾನೋತ್ಪತ್ತಿ ಮೇಲೆ ‍ಪರಿಣಾಮ ಬೀರುತ್ತದೆ. ಜಾನುವಾರುಗಳಲ್ಲಿ ಬಂಜೆತನ, ಕಡಿಮೆ ಹಾಲು ಉತ್ಪಾದನೆ, ಗರ್ಭಪಾತಕ್ಕೂ ಕಾರಣವಾಗುತ್ತದೆ.

ಭಾರತದಲ್ಲಿ ಈವರೆಗೆ ಈ ಸೋಂಕಿಗೆ ಯಾವುದೇ ಲಸಿಕೆಯಾಗಲೀ, ಚಿಕಿತ್ಸೆಯಾಗಲೀ ಲಭ್ಯವಿರಲಿಲ್ಲ. ಸದ್ಯ ಈ ಲಸಿಕೆಯ ಅಭಿವೃದ್ಧಿಯಿಂದಾಗಿ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ.