ರಾಜ್ಯ ಸರಕಾರದ ಉದ್ಯೋಗಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ

ಬೆಂಗಳೂರು; ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಎಲ್ಲಾ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರದ ಆದೇಶ ಹೊರಡಿಸಿದೆ.

ಖಾಲಿ ಹುದ್ದೆಗಳ ಭರ್ತಿ, ನೇಮಕಾತಿಯ ವಯೋಮಿತಿ ಹೆಚ್ಚಳ ಮತ್ತು ಕೆಎಎಸ್ ಅಧಿಸೂಚನೆಯಲ್ಲಿ ಕಂಡುಬಂದಿರುವ ಕನ್ನಡ ಅನುವಾದದ ತಪ್ಪುಗಳನ್ನು ಪರಿಶೀಲಿಸಿ ಅಧಿಸೂಚನೆ ರದ್ದುಪಡಿಸಲು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. 5 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಜನಪ್ರತಿನಿಧಿಗಳು, ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಇನ್ನೂ ಈ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಎಲ್ಲಾ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ ಒಂದು ಬಾರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಆದೇಶ ಹೊರಡಿಸಿದ ದಿನಾಂಕದ ಬಳಿಕ ದಿನಾಂಕ 31-12-2027 ರವರೆಗೆ ನೇರ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಈ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಸಾಮಾನ್ಯ ವರ್ಗಕ್ಕೆ 35 ವರ್ಷದಿಂದ 38 ವರ್ಷ ವಯೋಮಿತಿ ಸಡಿಲಿಕೆ ಆದೇಶ ಹೊರಡಿಸಲಾಗಿದೆ. ಒಬಿಸಿ ವರ್ಗಕ್ಕೆ 38 ವರ್ಷದಿಂದ 41 ವರ್ಷ ಹಾಗೂ ಎಸ್‌ಸಿ/ಎಸ್‌ಟಿ/ಪ್ರವರ್ಗ-1 ವರ್ಗಕ್ಕೆ 40 ವರ್ಷದಿಂದ 43 ವರ್ಷಕ್ಕೆ ವಯೋಮಿತಿ ಹೆಚ್ಚಿಸಲಾಗಿದೆ.