ಬಾಲಕಿಯನ್ನು ಗರ್ಭಿಣಿ ಮಾಡಿ ಮದುವೆಯಾಗಲ್ಲ ಎಂದ ಪ್ರಿಯಕರ: ಕತ್ತು ಸೀಳಿ ಪ್ರಿಯಕರನ ಕೊಲೆ ಮಾಡಿದ ಅಪ್ರಾಪ್ತ ಬಾಲಕಿ!

ಮೂರು ತಿಂಗಳು ಗರ್ಭಿಣಿ ಮಾಡಿ ಮದುವೆಯಾಗಲ್ಲ ಎಂದ ಪ್ರಿಯಕರನನ್ನು 16 ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಲಾಡ್ಜ್​ವೊಂದರಲ್ಲಿ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಛತ್ತೀಸ್​ಗಢದ ರಾಯ್​ಪುರದಲ್ಲಿ ನಡೆದಿದೆ. ಅಪ್ರಾಪ್ರ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಂಗಳವಾರ (ಸೆ. 30) ವರದಿಯಾಗಿದೆ.

ಬಿಹಾರ ಮೂಲದ ಮೊಹಮ್ಮದ್ ಸದ್ದಾಂ ಕೊಲೆಯಾದ ಪ್ರಿಯಕರ. ಅಭನ್ಪುರದಲ್ಲಿ ಎಂಎಸ್ ಎಂಜಿನಿಯರಿಂಗ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಅಪ್ರಾಪ್ತ ಬಾಲಕಿ ಬಿಲಾಸ್ಪುರದ ಕೋನಿ ಠಾಣಾ ವ್ಯಾಪ್ತಿಯ ನಿವಾಸಿ. ಸೆ. 28ರಂದು ಗೆಳೆಯನನ್ನು ನೋಡಲಯ ರಾಯ್​ಪುರಕ್ಕೆ ಬಂದಿದ್ದಳು ಎನ್ನಲಾಗಿದೆ. ಇಬ್ಬರೂ ನಗರದ ಸತ್ಕರ್ ಗಾಲಿಯಲ್ಲಿರುವ ಏವನ್ ಲಾಡ್ಜ್‌ನಲ್ಲಿ ತಂಗಿದ್ದರು.

ಈ ವೇಳೆ ಬಾಲಕಿ ತಾನು ಗರ್ಭಿಣಿಯಾಗಿದ್ದು, ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ. ಆದರೆ ಮೃತ ಸದ್ದಾಂ ಬಾಲಕಿಗೆ ಮದುವೆಯಾಗಲ್ಲ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದ, ಈ ಕುರಿತು ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಚಾಕು ತೆಗೆದುಕೊಂಡು ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.

ಸೆ. 28ರ ತಡರಾತ್ರಿ ಸದ್ದಾಂ ಲಾಡ್ಜ್​ನಲ್ಲಿ ಮಲಗಿದ್ದಾಗ ಬಾಲಕಿ ಅದೇ ಚಾಕುವನ್ನು ತೆಗೆದುಕೊಂಡು ಅವನ ಕತ್ತು ಸೀಳಿದ್ದು, ಬಳಿಕ ಸದ್ದಾಂನ ಮೊಬೈಲ್​ ತೆಗೆದುಕೊಂಡು, ರೂಮ್ ಬಾಗಿಲು ಹಾಕಿಕೊಂಡು ತನ್ನ ಹುಟ್ಟುರು ಬಿಲಾಸ್ಪುರಕ್ಕೆ ವಾಪಸ್ ಆಗಿದ್ದಾಳೆ. ಮನೆಗೆ ಬಂದ ನಂತರ ನಡೆದ ಘಟನೆಯನ್ನು ತಾಯಿ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ತಕ್ಷಣ ತಾಯಿ ಮಗಳನ್ನು ಕರೆದುಕೊಂಡು ಕೋನಿ ಪೊಲೀಸ್ ಠಾಣೆಗೆ ಹೋಗಿ ನಡೆದ ಅಪರಾಧದ ಬಗ್ಗೆ ದೂರು ನೀಡಿದ್ದಾರೆ. ಬಾಲಕಿ ಮಾಹಿತಿ ಆಧಾರದ ಮೇಲೆ ರಾಯ್​ಪುರ ಪೊಲೀಸರು ಏವನ್ ಲಾಡ್ಜ್​ಗೆ ಭೇಟಿ ನೀಡಿದ್ದು, ಕೊಠಡಿಯಲ್ಲಿದ್ದ ಸದ್ದಾಂ ಶವವನ್ನು ಹೊರ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಕುರಿತು ಮಾತನಾಡಿರುವ ರಾಯ್​ಪುರ ಪೊಲೀಸರು, ಬಿಹಾರದಲ್ಲಿರುವ ಸದ್ದಾಂ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿದೆ. ಮೃತನ ಫೋನ್ ನಮ್ಮ ವಶದಲ್ಲಿದೆ. ಪ್ರಕರಣ ದಾಖಲಿಸಲಾಗಿದೆ. ಘಟನೆ ಬಗ್ಗೆ ಅಪ್ರಾಪ್ತ ಬಾಲಕಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅಪ್ರಾಪ್ತ ವಯಸ್ಕಳು ಮೂರು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಲು ನಿರಾಕರಿಸಿದ್ದಳು. ಮೃತ ಸದ್ದಾಂ ಅವಳನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿ ಗರ್ಭಪಾತಕ್ಕೆ ಒತ್ತಾಯಿಸಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇದು ಇಬ್ಬರ ನಡುವೆ ಪದೇ ಪದೇ ಜಗಳಕ್ಕೆ ಕಾರಣವಾಗಿ, ಕೊನೆಗೆ ಕೊಲೆ ನಡೆದಿದೆ ಎಂದು ತಿಳಿಸಿದ್ದಾರೆ.