ಜೈಪುರ: ಬೆಂಕಿ ಅವಘಡ ಸಂಭವಿಸಿ ಖ್ಯಾತ ಬಾಲನಟ, ಅವರ ಸಹೋದರ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.ಸೋನಿ ಸಬ್ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಶ್ರೀಮದ್ ರಾಮಾಯಣದಲ್ಲಿ ಪುಷ್ಕಲ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ವೀರ್ ಶರ್ಮಾ (10) ಮತ್ತು ಸಹೋದರ ಶೋರಿಯಾ ಶರ್ಮಾ (16) ಮೃತಪಟ್ಟಿದ್ದಾರೆ.
ಬಹು ಮಹಡಿಯ ಕಟ್ಟಡದಲ್ಲಿ ಭಾನುವಾರ ಬೆಳಗಿನ ಜಾವ 2 ಗಂಟೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ನಡೆದ ಸಂದರ್ಭದಲ್ಲಿ ಸಹೋದರರು ಮಾತ್ರ ಮನೆಯಲ್ಲಿದ್ದರು ಎನ್ನಲಾಗಿದೆ. ತರಬೇತಿ ಕೇಂದ್ರದ ಶಿಕ್ಷಕರಾಗಿರುವ ತಂದೆ ಜಿತೇಂದ್ರ ಶರ್ಮಾ ಭಜನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ತಾಯಿ, ನಟಿ ರೀಟಾ ಶರ್ಮಾ ಆ ಸಮಯದಲ್ಲಿ ಮುಂಬೈನಲ್ಲಿದ್ದರು ಎನ್ನಲಾಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರೂ ಮಕ್ಕಳನ್ನು ಉಳಿಸಲು ಸಾಧ್ಯವಾಗಲಿಲ್ಲ.
ಭಾನುವಾರ ಬೆಳಿಗ್ಗೆ ಘಟನಾ ಸ್ಥಳವನ್ನು ಪರಿಶೀಲಿಸಿದ ಕೋಟಾ ಎಸ್ಪಿ ತೇಜೇಶ್ವಾನಿ ಗೌತಮ್, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.ಡ್ರಾಯಿಂಗ್ ರೂಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿದ್ದೆಯಲ್ಲಿದ್ದ ಮಕ್ಕಳು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆ ಇದೆ, ಏಕೆಂದರೆ ಬೆಂಕಿಯ ಜ್ವಾಲೆ ಇತರ ಕೋಣೆಗಳಿಗೆ ಹರಡಲಿಲ್ಲ ಎಂದು ಅವರು ಹೇಳಿದ್ದಾರೆ.
ಅನಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೀಪಶ್ರೀ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಫ್ಲಾಟ್ನಲ್ಲಿ ಈ ಘಟನೆ ನಡೆದಿದೆ ಎಂದು ವೃತ್ತ ನಿರೀಕ್ಷಕ ಭೂಪೇಂದ್ರ ಸಿಂಗ್ ತಿಳಿಸಿದ್ದಾರೆ.
ಫ್ಲಾಟ್ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಬಾಗಿಲು ಒಡೆದು ನೋಡಿದಾಗ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಬಂದಿದೆ.
ತಾಯಿ ಮುಂಬೈನಿಂದ ಬಂದ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕುಟುಂಬದವರ ಇಚ್ಛೆಯಂತೆ, ಮಕ್ಕಳ ಕಣ್ಣುಗಳನ್ನು ದಾನ ಮಾಡಲಾಗಿದೆ.
ಬಿಎನ್ಎಸ್ಎಸ್ ಕಾಯ್ದೆಯ ಸೆಕ್ಷನ್ 194 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಬೆಂಕಿ ಮತ್ತು ಸಾವುಗಳಿಗೆ ನಿಖರವಾದ ಕಾರಣವನ್ನು ತಿಳಿಯಲು ತನಿಖೆ ಮುಂದುವರೆದಿದೆ.


















