ಮನೆಯಲ್ಲೇ ಸುಲಭದಲ್ಲಿ ಅಣಬೆ ಬೆಳೆಸಿ ಒಳ್ಳೆಯ ಹಣ ಗಳಿಸಿ : ಅಣಬೆ ಕೃಷಿಯ ಬಗ್ಗೆ ಸಿಂಪಲ್ಲಾಗ್ ಹೇಳ್ತಿವಿ ಕೇಳಿ!

ಕೃಷಿ ಮಾಡಬೇಕು ಅಂದರೆ ಎಕರೆಗಟ್ಟಲೆ ಜಮೀನು, ಲಕ್ಷಗಟ್ಟಲೆ ಹೂಡಿಕೆ ಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಇದು ಸಂಪೂರ್ಣ ತಪ್ಪು ಕಲ್ಪನೆ. ಇಂದಿನ ದಿನಗಳಲ್ಲಿ ಅಣಬೆ (ಮಶ್ರೂಮ್) ಬೆಳೆ ಅತ್ಯಂತ ಬೇಡಿಕೆಯಲ್ಲಿದ್ದು, ಹೋಟೆಲ್ಗಳಿಂದ ಹಿಡಿದು ಮನೆಗಳವರೆಗೆ ಎಲ್ಲೆಡೆ ಗ್ರಾಹಕರಿದ್ದಾರೆ. ವಿಶೇಷವೆಂದರೆ, ಈ ಬೆಳೆಗೆ ಹೆಚ್ಚಿನ ಜಾಗವೂ ಅಗತ್ಯವಿಲ್ಲ, ದೊಡ್ಡ ಹೂಡಿಕೆಯೂ ಬೇಕಾಗಿಲ್ಲ. ಮನೆಯ ಒಂದು ಮೂಲೆಯಲ್ಲೇ ಬೆಳೆಸಬಹುದಾದ ಈ ಅಣಬೆಗಳು ಕೈತುಂಬಾ ಆದಾಯ ತರುವ ಸಾಮರ್ಥ್ಯ ಹೊಂದಿವೆ.ಬನ್ನಿ ಹಾಗಾದ್ರೆ ಅಣಬೆ ಕೃಷಿ ಹೇಗೆ ಮಾಡ್ಬೋದು ಅನ್ನೋದ್ರ ಬಗ್ಗೆ ಒಂದಷ್ಟು ಐಡಿಯಾ ಕೊಡ್ತೇವೆ

ಮೊದಲು ಅಣಬೆ ಕೃಷಿಗೆ ಸೂಕ್ತ ಜಾಗ ಬೇಕು:

ಅಣಬೆ ಬೆಳೆಯಲು ಸೂರ್ಯನ ಬೆಳಕು ಬೀಳದ, ತಂಪಾದ ಮತ್ತು ತೇವಾಂಶ ಹೊಂದಿರುವ ಸ್ಥಳ ಬೇಕಾಗುತ್ತದೆ. ಮನೆಯ ಸ್ಟೋರ್ ರೂಮ್, ಅಟ್ಟ ಅಥವಾ ಮಂಚದ ಕೆಳಭಾಗ ಇದಕ್ಕೆ ಸೂಕ್ತ ಹಾಗಾಗಿ ಅಂತಹ ಜಾಗ ಹುಡುಕಿ.

ಯಾವ ಅಣಬೆ ಬೆಳೆಸಬಹುದು?

ನಮ್ಮಲ್ಲಿ ಮೂರು ತರಹದ ಅಣಬೆಗಳನ್ನು ಬೆಳೆಯಲಾಗುತ್ತದೆ:

ಬಟನ್ ಮಶ್ರೂಮ್ – ತಂಪಾದ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ.

ಸಿಂಪಿ (Oyster) ಮತ್ತು ಹಾಲಿನ ಅಣಬೆ – ಸ್ವಲ್ಪ ಬೆಚ್ಚಗಿನ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ.

ನಿಮ್ಮ ಊರಿನ ಹವಾಮಾನಕ್ಕೆ ತಕ್ಕಂತೆ ಇಲ್ಲಿರುವ ಅಣಬೆಯ ಜಾತಿಯನ್ನು ಆಯ್ಕೆಮಾಡುವುದು ಒಳ್ಳೆಯದು.

ಗೊಬ್ಬರ ತಯಾರಿ ಬಗ್ಗೆ ಒಂದಷ್ಟು:

ಅಣಬೆ ಕೃಷಿಯ ಗೊಬ್ಬರ ತಯಾರಿಕೆ ಬಹುಮುಖ್ಯ. ಗೋಧಿ ಹುಲ್ಲು, ಕೋಳಿ ಗೊಬ್ಬರ, ಕುದುರೆ ಸಗಣಿ, ಜಿಪ್ಸಮ್ ಮತ್ತು ಸ್ವಲ್ಪ ಯೂರಿಯಾ ಮಿಶ್ರಣ ಮಾಡಿ, ಕೆಲ ದಿನಗಳವರೆಗೆ ಹುದುಗಲು ಬಿಡಬೇಕು. ಬಳಿಕ, ತಯಾರಾದ ಗೊಬ್ಬರವನ್ನು 15–18 ಸೆಂ.ಮೀ ದಪ್ಪದಂತೆ ಟ್ರೇಗಳಲ್ಲಿ ತುಂಬಬೇಕು.

ಬೀಜ ಬಿತ್ತನೆ:

ತಯಾರಾದ ಗೊಬ್ಬರದ ಮೇಲೆ ಅಣಬೆಯ ಬೀಜಗಳನ್ನು (ಮೈಸೀಲಿಯಂ) ಉದುರಿಸಬೇಕು ಅಥವಾ ಚೆನ್ನಾಗಿ ಮಿಶ್ರಣ ಮಾಡಬೇಕು. ತೇವಾಂಶ ಉಳಿಸಲು ಪತ್ರಿಕೆ ಮುಚ್ಚಿ, ಆಗಾಗ ನೀರು ಸಿಂಪಡಿಸಬೇಕು.

ಮಣ್ಣು ಮುಚ್ಚುವುದು ಕೆಲವು ದಿನಗಳ ಬಳಿಕ, ಹಸುವಿನ ಸಗಣಿ ಮತ್ತು ಮಣ್ಣಿನ ಮಿಶ್ರಣವನ್ನು ತೆಳುವಾದ ಪದರವಾಗಿ ಹರಡಬೇಕು. ಈ ಹಂತದಲ್ಲಿ ಉಷ್ಣಾಂಶವನ್ನು ಸುಮಾರು 27°C ಇಡಬೇಕು.

ಮೊದಲ ಫಸಲು

ಸುಮಾರು 15 ದಿನಗಳಲ್ಲೇ ಟ್ರೇಗಳಲ್ಲಿ ಪುಟ್ಟ ಪುಟ್ಟ ಬಿಳಿ ಅಣಬೆ ಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಇದು ಕೊಯ್ಲಿಗೆ ಸಿದ್ಧವಾದ ಮೊದಲ ಫಸಲು.

ಕೊಯ್ಲು ಮಾಡೋದು ಹೇಗೆ?

ಅಣಬೆಯನ್ನು ಕೈಯಿಂದ ಬಲವಾಗಿ ಕಿತ್ತು ಬಿಡದೆ, ನಿಧಾನವಾಗಿ ತಿರುಗಿಸಿ ಎತ್ತುವುದು ಸೂಕ್ತ. ಬುಡದ ಸ್ವಲ್ಪ ಭಾಗ ಟ್ರೇಯಲ್ಲಿ ಉಳಿದರೆ ಮುಂದಿನ ಫಸಲು ಬೆಳೆಯಲು ಸಹಾಯಕವಾಗುತ್ತದೆ.

ಹವ್ಯಾಸವನ್ನೇ ವ್ಯಾಪಾರವಾಗಿಸಿ:

ಆರಂಭದಲ್ಲಿ ಹವ್ಯಾಸವಾಗಿ ಬೆಳೆಯುವ ಅಣಬೆ ಕೃಷಿ ಕ್ರಮೇಣ ವ್ಯಾಪಾರಿಕ ಬೆಳವಣಿಗೆಯಾಗಿ ಮಾರ್ಪಡಬಹುದು. ಹತ್ತಿರದ ಅಂಗಡಿಗಳು, ಹೋಟೆಲ್ಗಳು ಮತ್ತು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸಬಹುದು. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಆದಾಯ ತರುವ ಈ ಅಣಬೆ ಬೆಳೆಯು ಇಂದಿನ ದಿನಗಳಲ್ಲಿ ಅತ್ಯಂತ ಭರವಸೆಯ ಕೃಷಿ ಉದ್ಯಮವಾಗಿದೆ.

ಅಣಬೆ ಬೀಜ ಮತ್ತು ಇನ್ನಷ್ಟು ಮಾಹಿತಿಗಾಗಿ:

ನರ್ಸರಿಗಳಲ್ಲಿ ವಿವಿಧ ಅಣಬೆ ಬೀಜಗಳು ನಿಮಗೆ ಸಿಗುತ್ತದೆ. ಅಲ್ಲದೇ ನಿಮ್ಮೂರಿನ ತೋಟಗಾರಿಕಾ ಇಲಾಖೆಗಳಲ್ಲಿಯೂ, ಕೃಷಿ ಇಲಾಖೆಗಳಲ್ಲಿಯೂ ಸಿಗುತ್ತದೆ. ತೋಟಗಾರಿಕಾ ಇಲಾಖೆಗಳಲ್ಲಿ, ಕೃಷಿ ಇಲಾಖೆಗಳಲ್ಲಿ ಅಣಬೆ ಕೃಷಿ ಕುರಿತು ಸಮಗ್ರ ಮಾಹಿತಿ ಕೂಡ ಸಿಗುತ್ತದೆ.