ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸ್ಥಿತಿ ಸಮೀಕ್ಷೆ (ಜಾತಿ ಗಣತಿ) ಸೆ.22ರಿಂದ ಆರಂಭವಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ‘ಜಾತಿ ಗಣತಿ’ ಸಮೀಕ್ಷೆಗೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದು, ತಡೆ ನೀಡಲು ನಿರಾಕರಿಸಿದೆ. ಜಾತಿ ಗಣತಿಗೆ ತಡೆ ನೀಡುವಂತೆ ಬ್ರಾಹ್ಮಣ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಮುಖಂಡರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ನಿಂದ ಸೆ.25 ರಂದು ಮಧ್ಯಂತರ ಆದೇಶ ಹೊರಬಿದ್ದಿದೆ.
ಅರ್ಜಿ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಹೈಕೋರ್ಟ್ ನಾಲ್ಕು ವಾರಗಳ ಕಾಲ ಗುಡುವು ನೀಡಿದೆ. ಅಲ್ಲಿಯವರೆಗೆ ಸಮೀಕ್ಷಾ ವರದಿ ಬಹಿರಂಗ ಪಡಿಸದಂತೆ ಅರ್ಜಿದಾರಿಂದ ಮನವಿ ಮಾಡಲಾಗಿದೆ. ದತ್ತಾಂಶದ ಗೌಪ್ಯತೆ ಸಂಬಂಧ ಪ್ರಮಾಣಪತ್ರ ಸಲ್ಲಿಸಲು, ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ಹೊರಡಿಸಲಾಗಿದೆ.
ಆಯೋಗ ಹೊರತುಪಡಿಸಿ ಬೇರೆ ಯಾರಿಗೂ ದತ್ತಾಂಶ ಸಿಗುವಂತಿಲ್ಲ ಎಂದು ಹೇಳಲಾಗಿದ್ದು, ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 2ನೇ ವಾರಕ್ಕೆ ಮುಂದೂಡಿದೆ.ಜಾತಿ ಸಮೀಕ್ಷೆ ನಡೆಸುವ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಹೈಕೋರ್ಟ್ ವಿಚಾರಣೆ ನಡೆಸಿದ ಒಂದು ದಿನದ ನಂತರ ಈ ಆದೇಶ ಹೊರಬಿದ್ದಿದೆ. ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ಸಮೀಕ್ಷೆಯಲ್ಲಿನ ಯಾವುದೇ ತಪ್ಪುಗಳನ್ನು ಅರ್ಜಿದಾರರು ಎತ್ತಿ ತೋರಿಸಿಲ್ಲ ಮತ್ತು ಸರ್ಕಾರಕ್ಕೆ ಅದನ್ನು ನಡೆಸಲು ಅಧಿಕಾರವಿಲ್ಲ ಎಂದು ಹೇಳಿಕೊಂಡಿಲ್ಲ ಎಂದು ಸಿಂಘ್ವಿ ಹೇಳಿದರು.
ಅರ್ಜಿದಾರರು ಸಮೀಕ್ಷೆಯ ವಿಧಾನವನ್ನು ಪ್ರಶ್ನಿಸುತ್ತಿದ್ದಾರೆ, ಇದರಲ್ಲಿ ಜಾತಿಯ ಜೊತೆಗೆ ಧರ್ಮವನ್ನು ದಾಖಲಿಸಲಾಗುತ್ತಿದೆ ಮತ್ತು ಜಾತಿ ಪಟ್ಟಿಯನ್ನು ಪ್ರಕಟಿಸುವ ಮುನ್ನ ಯಾವುದೇ ಪೂರ್ವ ವಿಶ್ಲೇಷಣೆ ನಡೆಸಲಾಗಿಲ್ಲ ಎಂಬ ಆರೋಪಗಳು ಸೇರಿವೆ ಎಂದು ಅವರು ಹೇಳಿದರು. ಸಮೀಕ್ಷೆಯ ಬಳಿಕ ಯಾವುದೇ ಲೋಪಗಳನ್ನು ಪ್ರಶ್ನಿಸಬಹುದು ಎಂದು ಹೈಕೋರ್ಟ್ ಗಮನಿಸಿದೆ. ಆದರೆ ಅರ್ಜಿದಾರರು ಸಮೀಕ್ಷೆ ಪ್ರಾರಂಭವಾಗುವ ಮುನ್ನ ಅದು ಹೇಗೆ ದೋಷಪೂರಿತವಾಗಿದೆ ಎಂಬುದನ್ನು ಪ್ರದರ್ಶಿಸದ ಕಾರಣ, ಯಾವುದೇ ತಡೆಯಾಜ್ಞೆ ಅಗತ್ಯವಿಲ್ಲ. ಹಿಂದುಳಿದ ವರ್ಗಗಳಿಗೆ ಪ್ರಯೋಜನ ಒದಗಿಸುವ ಉದ್ದೇಶವನ್ನು ಸಮೀಕ್ಷೆ ಹೊಂದಿದೆ ಎಂದು ನ್ಯಾಯಾಲಯ ಗಮನಿಸಿದೆ.


















