ಈಗಿನ ಹೊಸ ಟ್ರೆಂಡ್ ನಲ್ಲಿ ನಾವು ನಮ್ಮ ವೈಯಕ್ತಿಕ ವಿವರಗಳನ್ನು ಖಾಸಗಿಯಾಗಿಡೋದೇ ಕಡಿಮೆಯಾಗಿದೆ. ಎಲ್ಲವನ್ನೂ ಸ್ನೇಹಿತರ ಮುಂದೆ, ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಬಿಡುತ್ತೇವೆ. ಎಷ್ಟೋ ಖಾಸಗಿ ಮಾತುಗಳು ಎಲ್ಲೆಲ್ಲೂ ಸೋರಿಕೆಯಾಗುತ್ತವೆ. ಆದರೆ ನಮಗೆ ಸಂಬಂಧಪಟ್ಟ ಒಂದಷ್ಟು ಮಾಹಿತಿಗಳನ್ನು ಖಾಸಗಿಯಾಗಿಡುವುದರಿಂದ ಎಷ್ಟೋ ಚಿಂತೆಗಳನ್ನು ತಪ್ಪಿಸಬಹುದು ಮತ್ತು ನೆಮ್ಮದಿಯುತ ಜೀವನ ನಡೆಸಬಹುದು ಎನ್ನುತ್ತೆ ಸೈಕಾಲಜಿ. ಇದರಿಂದ ಮಾನಸಿಕ ನೆಮ್ಮದಿ ಕೂಡ ಹೆಚ್ಚುತ್ತದೆ. ಸೈಕಾಲಜಿ ಪ್ರಕಾರ ನಾವು ಕೆಲವೊಂದು ವಿಷಯಗಳನ್ನು ಖಾಸಗಿಯಾಗಿಡಬೇಕಂತೆ ಯಾವುದು ಆ ಸಂಗತಿಗಳು ತಿಳಿದುಕೊಳ್ಳೋಣ ಬನ್ನಿ.
- ಅತಿಯಾದ ಹಂಚಿಕೊಳ್ಳುವಿಕೆ ಬೇಡ:
ಅತಿಯಾಗಿ ಹಂಚಿಕೊಳ್ಳುವುದರಿಂದ ತಪ್ಪು ತಿಳುವಳಿಕೆಗಳು ಮತ್ತು ಗಾಸಿಪ್ಗಳು ಹುಟ್ಟಬಹುದು. ಪ್ರೇಮ ವೈಫಲ್ಯಗಳು, ಸಂಬಂಧಗಳ ಒತ್ತಡಗಳಂತಹ ವಿಷಯಗಳನ್ನು ನಂಬಿಕಸ್ಥ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಮಾತ್ರ ಹಂಚಿಕೊಳ್ಳುವುದು ಸಮಂಜಸ.
- ಗುರಿಗಳನ್ನು ನಿಮ್ಮೊಳಗೆ ಇರಿಸಿ ಮತ್ತು ಸಾಧಿಸಿ:
ನಿಮ್ಮ ಕನಸುಗಳನ್ನು ಎಲ್ಲರೊಂದಿಗೆ ಹಂಚಿಕೊಂಡಾಗ, ಅವುಗಳನ್ನು ಈಗಾಗಲೇ ಸಾಧಿಸಿದಂತೆಯೇ ಮನಸ್ಸಿಗೆ ಭಾಸವಾಗಬಹುದು. ಇದರಿಂದ ಪ್ರೇರಣೆ ಕಡಿಮೆಯಾಗುವ ಸಾಧ್ಯತೆ ಇದೆ. ಗುರಿಗಳನ್ನು ಮನದಾಳದಲ್ಲಿ ಇಟ್ಟುಕೊಂಡು ಸಾಧನೆಗಾಗಿ ಶ್ರಮಿಸುವುದು ಉತ್ತಮ.
ಹಣದ ವಿಚಾರಗಳು ಅತಿಸಂವೇದನಾಶೀಲ. ನಿಮ್ಮ ಆದಾಯ, ಸಾಲಗಳು ಅಥವಾ ಹೂಡಿಕೆಗಳನ್ನು ಬಯಲು ಮಾಡಿದರೆ ಹೋಲಿಕೆಗಳು, ಅಸೂಯೆ ಅಥವಾ ತೀರ್ಪುಗಳಿಗೆ ಕಾರಣವಾಗಬಹುದು. ಅಧ್ಯಯನಗಳ ಪ್ರಕಾರ 70% ವಯಸ್ಕರು ಆರ್ಥಿಕ ಕಾರಣಗಳಿಂದ ಸಂಬಂಧಗಳಲ್ಲಿ ಒತ್ತಡವನ್ನು ಅನುಭವಿಸುತ್ತಾರೆ.

- ನಿಮ್ಮ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಬೇಡಿ:
ಕುಟುಂಬದ ವಿಷಯಗಳು ವೈಯಕ್ತಿಕ ಹಾಗೂ ಭಾವನಾತ್ಮಕ. ಇವುಗಳನ್ನು ಎಲ್ಲರೊಂದಿಗೆ ಹಂಚಿಕೊಂಡರೆ, ಸಂಬಂಧಿಕರ ಗೌಪ್ಯತೆ ಉಲ್ಲಂಘಿತವಾಗುತ್ತದೆ ಮತ್ತು ಅನಗತ್ಯ ತೀರ್ಪುಗಳಿಗೆ ಕಾರಣವಾಗಬಹುದು. ಇಂತಹ ಸಮಸ್ಯೆಗಳನ್ನು ನಂಬಿಕಸ್ಥರು ಅಥವಾ ತಜ್ಞರೊಂದಿಗೆ ಮಾತ್ರ ಚರ್ಚಿಸುವುದು ಒಳಿತು.
* ಹಿಂದಿನ ವಿಷಾದಗಳು ಮತ್ತು ತಪ್ಪುಗಳು
ಹಿಂದಿನ ತಪ್ಪುಗಳನ್ನು ನಿರಂತರವಾಗಿ ಹಂಚಿಕೊಳ್ಳುವುದರಿಂದ ಜನರು ನಿಮ್ಮನ್ನು ಆ ತಪ್ಪುಗಳ ಆಧಾರದ ಮೇಲೆ ಅಳೆಯಬಹುದು. ಬದಲಾಗಿ ಬದುಕಿನ ಮೇಲೆ ಗಮನಹರಿಸಿ, ವೈಯಕ್ತಿಕ ಬೆಳವಣಿಗೆಗೆ ಒತ್ತು ಕೊಡುವುದು ಉತ್ತಮ.
- ನಿಮ್ಮ ಒಳ್ಳೆಯ ಕಾರ್ಯಗಳು:
ನೀವು ಮಾಡಿದ ಒಳ್ಳೆಯ ಕಾರ್ಯಗಳನ್ನು ಪ್ರಚಾರ ಮಾಡಿದರೆ ಅವುಗಳ ಮೌಲ್ಯ ಕುಗ್ಗಬಹುದು. ಇತರರು ನಿಮ್ಮ ಉದ್ದೇಶಗಳನ್ನು ಅನುಮಾನಿಸುವ ಸ್ಥಿತಿ ಉಂಟಾಗಬಹುದು. ನಿಸ್ವಾರ್ಥ ದಯೆಯನ್ನು ಮೌನದಲ್ಲೇ ಕಾಪಾಡಿಕೊಳ್ಳುವುದು ಅದರ ನಿಜವಾದ ಅರ್ಥವನ್ನು ಉಳಿಸುತ್ತದೆ.
- ನಿಮ್ಮ ನಂಬಿಕೆಗಳು ನಿಮ್ಮಲ್ಲೇ ಇರಲಿ
ಧಾರ್ಮಿಕ, ರಾಜಕೀಯ ಅಥವಾ ತಾತ್ವಿಕ ನಂಬಿಕೆಗಳು ವೈಯಕ್ತಿಕವಾಗಿರುತ್ತವೆ. ಇವುಗಳನ್ನು ಅತಿಯಾಗಿ ಹಂಚಿಕೊಳ್ಳುವುದು ವಾದವಿವಾದಗಳಿಗೆ ಹಾಗೂ ಸಂಬಂಧಗಳ ಬಿರುಕುಗಳಿಗೆ ಕಾರಣವಾಗಬಹುದು. ಶಾಂತಿಯನ್ನು ಕಾಪಾಡಿಕೊಳ್ಳಲು ಇವುಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಉತ್ತಮ.
- ನಿಮ್ಮ ವೈದ್ಯಕೀಯ ಇತಿಹಾಸ ನಿಮಗೆ ತಿಳಿದಿರಲಿ ಸಾಕು
ಆರೋಗ್ಯದ ಮಾಹಿತಿ ಅತ್ಯಂತ ವೈಯಕ್ತಿಕ. ಇದನ್ನು ಎಲ್ಲರೊಂದಿಗೆ ಹಂಚಿಕೊಂಡರೆ ಅನಗತ್ಯ ಸಲಹೆಗಳು, ತೀರ್ಪುಗಳು ಹಾಗೂ ಕೆಲವೊಮ್ಮೆ ತಾರತಮ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯ ಸಂಬಂಧಿತ ಮಾಹಿತಿಯನ್ನು ನಂಬಿಕಸ್ಥರೊಂದಿಗೆ ಮಾತ್ರ ಹಂಚಿಕೊಳ್ಳುವುದು ಅಗತ್ಯ. ಈ ಎಲ್ಲಾ ಸಂಗತಿಗಳನ್ನು ಆದಷ್ಟು ಗೌಪ್ಯವಾಗಿರಿಸಿದರೆ ಮಾನಸಿಕ ನೆಮ್ಮದಿ ಜಾಸ್ತಿಯಾತ್ತದೆ ಎನ್ನುತ್ತೆ ಸೈಕಾಲಜಿ.


















