ಉಡುಪಿ: ರಾಷ್ಟ್ರೀಯ ಲಾಂಛನ ಸ್ತಂಭ ನಿರ್ಮಿಸಲು ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ, ಇಂದ್ರಾಳಿಯ ಹಳೆ ಮೇಲ್ಸೇತುವೆಯ ಅಶೋಕ ಸ್ತಂಭಗಳು ಧರೆಗುರುಳಿ ಹಲವು ವರ್ಷಗಳು ಕಳೆದಿವೆ. ಹಳೆ ಸೇತುವೆ ನಿರ್ಮಾಣದ‌ ಸಮಯದಲ್ಲಿಯೇ ನಿರ್ಮಿಸಲ್ಪಟ್ಟ ಸ್ತಂಭಗಳು ಇವಾಗಿವೆ. ಶಿಥಿಲಗೊಂಡ ರಾಷ್ಟ್ರಲಾಂಛನದ ಅವಶೇಷಗಳು ಹೆದ್ದಾರಿಯ ಸನಿಹದ ಪೊದೆಗಳಲ್ಲಿ ಎಸೆದಿರುವುದು ಕಂಡುಬಂದಿದೆ.

ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣವಾಗಿ ಸೇತುವೆಗೆ ಅಶೋಕ ಸ್ತಂಭಗಳನ್ನು ಹೊಸದಾಗಿ ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.ಭಾರತ ಸರಕಾರವು 1950 ರಲ್ಲಿ ಅಧಿಕೃತವಾಗಿ ಸಾರಾನಾಥದ ಅಶೋಕ ಸ್ತಂಭದ ನಾಲ್ಕು ಸಿಂಹಗಳುಳ್ಳ, ಲಾಂಛನವನ್ನು ರಾಷ್ಟ್ರೀಯ ಲಾಂಛನವಾಗಿ ಸ್ವೀಕರಿಸಿತು. ಭಾರತದ ಶಕ್ತಿ, ನ್ಯಾಯ, ಶಾಂತಿ, ಮತ್ತು ಸವಿಷ್ಣುವಿತೆಯ ಸಂದೇಶ ಸಾರುವ ಪವಿತ್ರ ಲಾಂಛನವು ಅವಶೇಷವಾಗಿ ಬಿದ್ದಿರುವುದನ್ನು ಕಂಡು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ಮೇಸ್ತರು ಬೇಸರ ವ್ಯಕ್ತಪಡಿಸಿದ್ದಾರೆ