ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಜರಗಿದ ಟೆನಿಸಬಾಲ್ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದುಬೈನ ವಿಠಲ್ ರಿಶಾನ್ ಮಾಲಕತ್ವದ ಮಂಗಳೂರಿನ ಟೆಕ್ನೋಟೈಟಾನ್ಸ್ ತಂಡವು ಯುನೈಟೆಡ್ ತಂಡವನ್ನು ಭರ್ಜರಿಯಾಗಿ ಮಣಿಸಿ ಈ ಭಾರಿಯ ಟೆಸ್ಟ್ ಚಾಂಪಿಯನ್ ಪೀಠವನ್ನು ಅಲಂಕರಿಸಿತು.
ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ವಿನೂತನ ಎನ್ನುವ ಮಾದರಿಯಲ್ಲಿ ಆಯೋಜನೆಗೊಂಡ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಂದೇದಿನದಲ್ಲಿ ಎರಡೂ ತಂಡಗಳು 25ಓವರುಗಳ ಎರಡು ಇನ್ನಿಂಗ್ಸನ್ನು ಕಡ್ಡಾಯವಾಗಿ ಆಡಲೇಬೇಕು.ಈ ಇನ್ನಿಂಗ್ಸಿಗಳ ಫಲಿತಾಂಶವು ಪಂದ್ಯದ ವಿಜೇತರನ್ನು ನಿರ್ಧರಿಸುತ್ತದೆ.
ಈ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಟೆಕ್ನೋಟೈಟಾನ್ಸ್ ತಂಡವು ತನ್ನ ಮೊದಲ ಇನ್ನಿಂಗ್ಸನಲ್ಲಿ ಯುನೈಟೆಡ್ ತಂಡದ ಶಿಸ್ತುಬದ್ಧ ದಾಳಿಗೆ ಆರಂಭದಲ್ಲೇ ಎಡವಿ ಮೊದಲ 20ರನ್ನು ಸೇರಿಸುವಷ್ಟರಲ್ಲೇ ಪ್ರಮುಖ ನಾಲಕ್ಕು ವಿಕೆಟ್ ಕಳೆದುಕೊಂಡಿತು.ಎರಡನೇ ಕ್ರಮಾಂಕದ ದಾಂಡಿಗ ಸ್ವಸ್ತಿಕ್ ಅವರು 27ರನ್ನು ಸೇರಿಸಿ ತಂಡವನ್ನು ಸ್ವಲ್ಪ ಆದರಿಸಿದರು.ಐದು ಮತ್ತು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸಮೀರ ಬಂಟ್ವಾಳ್ 20ರನ್ನು ಹಾಗೂ ಇಮ್ರಾನ್ ಅವರ 22ರನ್ನುಗಳ ಸಹಾಯದಿಂದ ತಂಡವು 133 ರನ್ನುಗಳನ್ನು ಪೇರಿಸಿತು.
ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಯುನೈಟೆಡ್ ತಂಡವು ಎದುರಾಳಿ ಟೆಕ್ನೋಟೈಟಾನ್ಸ್ ತಂಡದ ಸ್ವಸ್ತಿಕ್,ಫಿರೋಜ್,ನೆಟ್ಟಣ್ಣ ಹಾಗೂ ನವಾಜ್ ಅವರ ಮಾರಕ ದಾಳಿಗೆ ಕುಸಿದು 109ರನ್ನುಗಳಿಗೆ ಇನ್ನಿಂಗ್ಸನ್ನು ಕೊನೆಗೊಳಿಸಿ 24ರನ್ನುಗಳ ಹಿನ್ನಡೆ ಅನುಭವಿಸಿತು.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಟೆಕ್ನೋಟೈಟಾನ್ಸ್ ತಂಡದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಇನ್ನಿಂಗ್ಸ್ ಆರಂಭವಾಗುತ್ತಿದ್ದಂತೆ
ಸಮೀರ ಬಂಟ್ವಾಳ್,ನವಾಜ್, ಹಾಗೂ ಫಿರೋಜ್ ಅವರ ವಿಕೆಟನ್ನು ಬೇಗನೆ ಕಳೆದುಕೊಂಡರೂ ಮಂಗಳೂರ್ ನವಾಜ್ 28ರನ್ನುಗಳ ಕೊಡುಗೆ ನೀಡಿ ಕೊಂಚಮಟ್ಟಿಗೆ ತಂಡವನ್ನು ಆದರಿಸಿದರು.ಎಂಟನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿದ ಬೀಸುದಾಂಡಿಗ ಪುನೀತ್ ಕೊಂಚಾಡಿ 44ಚೆಂಡುಗಳಲ್ಲಿ ಅಮೋಘ 82ರನ್ನು ಸಿಡಿಸಿ ಪಂದ್ಯದ ಪಥವನ್ನೇ ಬದಲಿಸಿದರು.ಟೈಗರ್ ಅಲ್ತಾಫ್ 19ರನ್ನು ಹಾಗೂ ನಿಖಿಲ್ ಪೂಜಾರಿ 20ರನ್ನು ಭಾರಿಸಿ ಪುನೀತ್ ಅವರಿಗೆ ಸಾತ್ ನೀಡಿದರು. ಪುನೀತರ ಸಾಹಸಿಕ ಆಟದಿಂದಾಗಿ ಟೆಕ್ನೋಟೈಟಾನ್ಸ್ ತಂಡವು ಅಂತಿಮವಾಗಿ 222 ರನ್ನುಗಳ ಬೃಹತ್ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತು.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಯುನೈಟೆಡ್ ತಂಡವು ಟೆಕ್ನೋಟೈಟಾನ್ಸ್ ತಂಡದ ಫಿರೋಜ್ ಹಾಗೂ ಸ್ವಸ್ತಿಕ್ ಅವರ ಆಕ್ರಮಣಕಾರಿ ಎಸೆತಗಳಿಗೆ ಕಂಗಾಲಾಗಿ ಇಪ್ಪತ್ತುರನ್ನು ಗಳಿಸುವಷ್ಟರಲ್ಲೇ ಆರು ವಿಕೆಟುಗಳನ್ನು ಕಳೆದುಕೊಂಡು ಆಪತ್ತಿನಲ್ಲಿ ಸಿಲುಕಿತ್ತು.ಎಂಟನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಸಚಿನ್ ಕುಮಾರ್ 42ಚೆಂಡುಗಳಲ್ಲಿ ಮಿಂಚಿನ 81ರನ್ನು ಪೇರಿಸಿದರು.ಸಹ ಆಟಗಾರರಾದ ಅಕ್ಷಯ್ ಉಳ್ಳಾಲ್ 32ರನ್ನು ಹಾಗೂ ಗೌತಮ್ ಪೈ 14ರನ್ನು ಗಳಿಸಿ ತಂಡದ ಮೊತ್ತವನ್ನು ಒಟ್ಟು 183ರ ಗೌರವಾನ್ವಿತ ಮೊತ್ತಕ್ಕೆ ತಲುಪಿಸಲು ನೆರವಾದರು.ನೆಟ್ಟಣ್ಣ ಮತ್ತು ನವಾಜ್ ಮಂಗಳೂರು ಕೊನೆಯ ನಾಲಕ್ಕು ವಿಕೆಟುಗಳನ್ನು ಉರುಳಿಸಿದರು.ತನ್ಮೂಲಕ ಟೆಕ್ನೋಟೈಟಾನ್ಸ್ ತಂಡವು ಯುನೈಟೆಡ್ ತಂಡವನ್ನು 63 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ ಶಿಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಟೆಕ್ನೋ ಟೈಟಾನ್ಸ್ ತಂಡದ ನಾಯಕ ಸಮೀರ್ ಹಾಗೂ ಯುನೈಟೆಡ್ ತಂಡದ ನಾಯಕ ಅನಿಲ್ ಮತ್ತು ಇತ್ತಂಡಗಳ ಆಟಗಾರರು ಆಯೋಜಕರೂ ಸೇರಿದಂತೆ ಊರಿನ ಪ್ರಮುಖ ಗಣ್ಯರೂ ಉಪಸ್ತಿತರಿದ್ದರು.
ಟೆಕ್ನೋ ಟೈಟಾನ್ಸ್ ತಂಡದ ಫಿರೋಜ್ ಅತ್ಯುತ್ತಮ ಎಸೆತಗಾರ ಪ್ರಶಸ್ತಿ ಗಳಿಸಿದರು.ಪುನೀತ್ ಕೊಂಚಾಡಿ ಅತ್ಯುತ್ತಮ ಬ್ಯಾಟ್ಸಮಾನ ಆಗಿ ಪುರಸ್ಕೃತರಾದರು.ಟೆಕ್ನೋ ತಂಡದ ಸ್ವಸ್ತಿಕ್ ಪಂದ್ಯಶ್ರೇಷ್ಠರಾಗಿ ಅಭಿನಂದಿಸಲ್ಪಟ್ಟರು.
ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ಅಂಗಣದಲ್ಲಿ ಜರಗಿದ ಈ ಪಂದ್ಯವು ನೂರಾರು ಕ್ರೀಡಾಪ್ರಿಯರನ್ನು ಕೊನೆಕ್ಷಣದವರೆಗೂ ತುದಿಗಾಲಲ್ಲಿ ಇರಿಸಿತ್ತು.
ಈಗಾಗಲೇ ದುಬೈಯಲ್ಲಿ ವಿಠಲ್ ರಿಶಾನ್ ನಾಯಕತ್ವದಲ್ಲಿ ಅನೇಕ ಪ್ರತಿಷ್ಠಿತ ಪಂದ್ಯಗಳನ್ನು ಗೆದ್ದಿರುವ ಟೆಕ್ನೋಟೈಟಾನ್ಸ್ ತಂಡವು ಇದೀಗ ಮಂಗಳೂರಿನಲ್ಲಿ ಮೊತ್ತಮೊದಲ ಭಾರಿಗೆ ವಿಠಲ್ ರಿಶಾನ್ ನಾಯಕರ ಮಾಲಕತ್ವದಲ್ಲಿ ಮಿರಮಿರನೆ ಮಿಂಚುವ ಟ್ರೋಫಿಯನ್ನು ಮುತ್ತಿಕ್ಕಿದೆ.
ಈ ಪಂದ್ಯದ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮಾಲಕ ವಿಠಲ್ ರಿಶಾನ್ ನಾಯಕರು ಟೆಕ್ನೋ ತಂಡದ ಪ್ರತಿಯೊಬ್ಬ ಆಟಗಾರನ ಶಿಸ್ತು,ಹೋರಾಟ,ಸ್ಪೂರ್ತಿಯನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.
ಮದ್ಯಪ್ರಾಚ್ಯ ದೇಶಗಳಿಗೆ ಸ್ಪೋರ್ಟ್ಸ್ ಕನ್ನಡ ಕ್ರೀಡಾ ವಾಹಿನಿಯ ಮುಖ್ಯ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ದುಬೈನ ವಿಠಲ್ ರಿಶಾನ್ ನಾಯಕರ ಮಾಲಕತ್ವದ ಮಂಗಳೂರಿನ ಟೆಕ್ನೋಟೈಟಾನ್ಸ್ ತಂಡವು ಈ ಭಾರಿಯ ಚಾಂಪಿಯನ್ ಆಗಿ ಹೊಮ್ಮಿರುವುದಕ್ಕೆ ಸ್ಪೋರ್ಟ್ಸ್ ಕನ್ನಡ ಚಾನೆಲಿನ ಸಂಸ್ಥಾಪಕ ಶ್ರೀರಾಮಕೃಷ್ಣ ಆಚಾರ್ಯರು ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಬರೆಹ: ಪಿ.ಲಾತವ್ಯ ಆಚಾರ್ಯ, ಉಡುಪಿ


















