ಉಡುಪಿ: 1965 ರಲ್ಲಿ ಆರಂಭಗೊಂಡು ನಿರಂತರವಾದ ಸಮಾಜಮುಖಿ ರಂಗ ಚಟುವಟಿಕೆಗಳೇ ರಂಗಭೂಮಿ ಸಂಸ್ಥೆಯನ್ನು ಆರು ದಶಕಗಳ ಕಾಲ ಉಳಿಸಿ ಬೆಳೆಸಿ ಮುನ್ನಡೆಸಿದೆ ಎಂದು ರಂಗಭೂಮಿ (ರಿ.) ಉಡುಪಿ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಮಾಹೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ಉಡುಪಿಯ ಹೋಟೆಲ್ ಡಯಾನದಲ್ಲಿ ಸೆ.20ರಂದು ನಡೆದ ರಂಗಭೂಮಿಯ ಸಂಸ್ಥೆಯ 60ನೇ ವಾರ್ಷಿಕ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಟಿ ಮಾಧವ ಎ ಪೈ ಅವರ ಕಾಲದಿಂದಲೂ ರಂಗಭೂಮಿ ಸಂಸ್ಥೆಗೆ ನಿರಂತರವಾಗಿ ಮಣಿಪಾಲದ ಸಂಸ್ಥೆ ಪ್ರೋತ್ಸಾಹಿಸುತ್ತಾ ಬಂದಿದೆ. ಅದಕ್ಕೆ ಕಾರಣ ಈ ಸಂಸ್ಥೆಯ ದೆಯ್ಯೋದ್ದೇಶ ಹಾಗೂ ಸಮಾಜಮುಖಿ ಚಟುವಟಿಕೆಗಳು. “ರಂಗಭೂಮಿ ರಂಗ ಶಿಕ್ಷಣ” ವು ಉಡುಪಿಯ ಮಕ್ಕಳಲ್ಲಿ ರಂಗಾಸಕ್ತಿಯನ್ನು ಹಾಗೂ ವ್ಯಕ್ತಿತ್ವದ ಬಹುಮುಖ ವಿಕಸನಕ್ಕೆ ಸಹಕಾರಿಯಾಗಿದೆ. ಈ ವರ್ಷ 25 ಪ್ರೌಢಶಾಲೆಗಳಲ್ಲಿ ರಂಗ ಶಿಕ್ಷಣವನ್ನು ನೀಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದರು.
ರಂಗಭೂಮಿಯ ರಂಗಭಾಷೆ ಕಾರ್ಯಕ್ರಮವು ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನು ಮೂಡಿಸಿದೆ , ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವು ಇನ್ನಷ್ಟು ಕಾಲೇಜುಗಳಿಗೆ ಹಬ್ಬಲಿ ಎಂದು ಆಶಿಸಿದರು.
ಕಳೆದ 16 ವರ್ಷಗಳಿಂದ ರಂಗಭೂಮಿಯನ್ನು ಮುನ್ನಡೆಸುತ್ತಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಸಮರ್ಥ ನಾಯಕತ್ವ, ಕ್ರಿಯಾಶೀಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಹಾಗೂ ಅವರ ತಂಡ ಅಭಿನಂದನಾರ್ಹ ಎಂದು ಡಾ. ಬಲ್ಲಾಳರು ಹೇಳಿದರು.
ರಂಗಭೂಮಿಯ ಕಾರ್ಯಕ್ರಮಗಳಿಗೆ ಉಡುಪಿಯ ಎಂಜಿಎಂ ಕಾಲೇಜು ಹಾಗೂ ಮಣಿಪಾಲದ ಸಂಸ್ಥೆಗಳು ಮುಂದೆಯೂ ನಿರಂತರವಾಗಿ ಪ್ರೋತ್ಸಾಹಿಸುವುದು ಎಂದರು.
ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಕಳೆದ ವರ್ಷದ ವಾರ್ಷಿಕ ವರದಿಯನ್ನು ಹಾಗೂ ಕೋಶಾಧಿಕಾರಿ ಭೋಜ ಯು. ಅವರ ಪರಿಶೋಧಿತ ಲೆಕ್ಕ ಪತ್ರಗಳನ್ನು ಮಂಡಿಸಿದರು.
ಸಂಸ್ಥೆಯ ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್. ರಾಜಗೋಪಾಲ ಬಲ್ಲಾಳರು ಉಪಸ್ಥಿತರಿದ್ದರು. ಸಾಧನೆಗಳ ಮೂಲಕ ಸಮಾಜದ ವಿವಿಧ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ರಂಗಭೂಮಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.












