“ವೋಟ್ ಚೋರ್ ಗದ್ದಿ ಚೋಡ್” ಅಭಿಯಾನ ಉಡುಪಿ ಜಿಲ್ಲಾ ಕಾಂಗ್ರೆಸ್ ಬೆಂಬಲ

ಉಡುಪಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಾದ್ಯಂತ ನಡೆಸುತ್ತಿರುವ “ವೋಟ್ ಚೋರ್ ಗದ್ದಿ ಚೋಡ್” ಅಭಿಯಾನಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಇದಕ್ಕೆ ಬೆಂಬಲವಾಗಿ ಉಡುಪಿ ಜಿಲ್ಲೆಯಲ್ಲಿರುವ 1111 ಬೂತ್ ಗಳಲ್ಲಿ ಸಹಿ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿ ಬೂತ್ ನಲ್ಲಿ ಕನಿಷ್ಠ 100 ಸಹಿ ಸಂಗ್ರಹ ಮಾಡಿ ಒಟ್ಟು 1,11,100 ಸಹಿ ಸಂಗ್ರಹಿಸಿ ರಾಹುಲ್ ಗಾಂಧಿ ಅವರಿಗೆ ಕಳುಹಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನ ಈಗಾಗಲೇ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಮುಂದಿನ 15 ದಿನಗಳ‌ ಕಾಲ ನಡೆಯಲಿದೆ ಎಂದರು.

ಮತ ಕಳ್ಳತನದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ ಜಾಗ ಖಾಲಿ ಮಾಡಬೇಕೆಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು “ವೋಟ್ ಚೋರ್ ಗದ್ದಿ ಚೋಡ್” ಅಭಿಯಾನವನ್ನು ದೇಶದಾದ್ಯಂತ ನಡೆಸುತ್ತಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಆಗಿರುವ ಮತಗಳ್ಳತನವನ್ನು ಚುನಾವಣಾ ಆಯೋಗದ ಮುಂದೆ ಇಡುವ ಅಭಿಯಾನ ಇದಾಗಿದೆ. ರಾಹುಲ್ ಗಾಂಧಿ ಪುರಾವೆ ಸಮೇತ ಹಗರಣ ಬಿಚ್ಚಿಟ್ಟಿದ್ದಾರೆ. ಮತದಾನದ ಹಕ್ಕಿನ ಕಳ್ಳತನ ನಿರಂತರವಾಗಿ ಆಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಹಾಗೂ ಚುನಾವಣಾ ಆಯೋಗ ವಿರೋಧ ಪಕ್ಷ ನೀಡುವ ಸಲಹೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ಸಲಹೆ ಸೂಚನೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಶಕ್ತಿ ಆಡಳಿತ ಪಕ್ಷಕ್ಕೆ ಬರುವುದಿಲ್ಲವೋ ಅದು ಒಳ್ಳೆಯ ಪ್ರಜಾಪ್ರಭುತ್ವ ಅಲ್ಲ ಎಂದು ಗುಡುಗಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ ಕೊಡವೂರು, ಜಯಪ್ರಕಾಶ್ ಹೆಗ್ಡೆ, ಗೋಪಾಲ ಪೂಜಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಳೆಬೈಲು, ಎಂ.ಎ ಗಫೂ‌ರ್ ಮೊದಲಾದವರು‌ ಇದ್ದರು.