ಬೈಂದೂರು ಪ.ಪಂ. ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆ

ಉಡುಪಿ: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರಿಸಿರುವುದನ್ನು ವಿರೋಧಿಸಿ ಬೈಂದೂರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಮೆರವಣಿಗೆಯಲ್ಲಿ ಆಗಮಿಸಿದ ಸಹಸ್ರಾರು ಸಂಖ್ಯೆಯ ರೈತರು, ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಕುಳಿತು ಶಾಲನ್ನು ತಿರುಗಿಸುತ್ತ ಘೋಷಣೆಗಳನ್ನು ಕೂಗಿದರು. ಕೆಲವರು ರಸ್ತೆಯಲ್ಲಿಯೇ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಗೇಟಿನ ಮುಂದೆ ಹಡಿ ಮಂಚದಲ್ಲಿ ಭತ್ತದ ತೆನೆಯನ್ನು ಬಡಿದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ರೈತರು ತಮ್ಮ ಕೈಯಲ್ಲಿ ನೊಗವನ್ನು ಪ್ರದರ್ಶಿಸಿದರು. ಗೇಟನ್ನು ತೆರೆಯುವಂತೆ ಪಟ್ಟು ಹಿಡಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್ ಶೆಟ್ಟಿ ಅವರು, ಹಳ್ಳಿಗಳನ್ನು, ಅರಣ್ಯ ಪ್ರದೇಶಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡುವವರೆಗೂ ನಾವು ಯವುದೇ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಭಾವಹಿಸುವುದಿಲ್ಲ ಎಂದರು.

ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದ ರೈತರು, ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿಸಿ, ಈ ಸಂಬಂಧ ಪ್ರತ್ಯೇಕ ಸಮಿತಿ ರಚಿಸಿ ಪುನರ್ ಪರಿಶೀಲನೆ ನಡೆಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು. ಪ್ರತಿಭಟನಕಾರರು ಸ್ಥಳದಲ್ಲಿ ಗಂಜಿ, ಚಟ್ನಿಯ ಅಡುಗೆ ತಯಾರಿಸಿ ಸೇವಿಸಿದರು.