ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಹಾಗೂ ವಾಹನಗಳ ಸಂಚಾರ ದಟ್ಟಣೆಯಿಂದದ ಗ್ರಾಮೀಣ ಹಾಗೂ ನಗರ ಪ್ರದೇಶದ ಹೆಚ್ಚಿನ ರಸ್ತೆಗಳು, ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯಯ ಹೆದ್ದಾರಿಗಳು ಹಾಳಾಗಿವೆ. ಕೂಡಲೇ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಶಾಸಕರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಗಳು ಮತ್ತು ಸರ್ವಿಸ್ ರಸ್ತೆಗಳು ಹಾಳಾಗಿದ್ದು ಹಲವಾರು ವಾಹನ ಸಂಚಾರ ದುರ್ಘಟನೆಗಳು ಸಂಭವಿಸಿ ಪ್ರಾಣ ಹಾನಿ ಹಾಗೂ ಗಾಯಗೊಂಡ ಪ್ರಕರಣಗಳು ಹೆಚ್ಚಾಗಿವೆ. ಈ ಕುರಿತು ವಿವಿಧ ಪತ್ರಿಕೆಗಳಲ್ಲಿ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2025 ರಲ್ಲಿ ರಸ್ತೆ ಅಪಘಾತಗಳು 702 ಕ್ಕೆ ಏರಿದ್ದು, ಸೆಪ್ಟೆಂಬರ್ ಆರಂಭದ ವೇಳೆಗೆ 122 ಸಾವುಗಳು ಸಂಭವಿಸಿದೆ. ಗಾಯಾಳುಗಳ ಸಂಖ್ಯೆಯೂ ಜಾಸ್ತಿಯಾಗುತ್ತಿವೆ.
ಕುಂದಾಪುರ ತೀರ್ಥಹಳ್ಳಿ ರಸ್ತೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕುಗಳನ್ನು ಒಳಗೊಂಡ 93 ಕಿ.ಮೀ ಉದ್ದವಿದೆ. ಕುಂದಾಪುರ, ಸತ್ವಾಡಿ, ರೈಲ್ವೆ ನಿಲ್ದಾಣ, ಬಸ್ರೂರ್, ಅಂಪಾರ್, ಸಿದ್ದಾಪುರ, ಹೊಸಂಗಡಿ, ಬಾಲೆಭಾರಿಘಾಟ್, ಮಾಸ್ತಿಕಟ್ಟೆ, ಯಡ್ಡೂರ್, ಕೈಮಾರ, ತೀರ್ಥಹಳ್ಳಿ ಪ್ರದೇಶಗಳನ್ನು ಸಂಪರ್ಕಿಸುತ್ತಿದ್ದು ಈ ರಸ್ತೆ ತುಂಬಾ ಕಿರಿದಾಗಿದ್ದು, ಕಳೆದ 40 ವರ್ಷಗಳಿಂದ ಅಗಲ ಮಾಡಿರುವುದಿಲ್ಲ. ಈಗ ವಾಹನ ಸಂಚಾರವು ಗಣನೀಯವಾಗಿ ಹೆಚ್ಚಾಗಿದ್ದು ಸಂಚಾರ ಅನುಪಾತದ ಪ್ರಕಾರ ರಸ್ತೆ ಅಗಲವಾಗಿಲ್ಲದೆ ಮತ್ತು ರಸ್ತೆಗಳ ಬದಿಯಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಅಪಘಾತಗಳು ಹೆಚ್ಚಿವೆ. ಸುಮಾರು 1960 ರಲ್ಲಿ ವಾರಾಹಿ ನದಿಗೆ ನಿರ್ಮಿಸಲಾದ ಕಂಡ್ಲೂರು ಸೇತುವೆಯು ಕುಸಿಯು ಅಂಚಿನಲ್ಲಿದ್ದು ಅದನ್ನು ಪುನರ್ ನಿರ್ಮಿಸಬೇಕಾಗಿದೆ ಎಂದವರು ಮನವಿ ಮಾಡಿಕೊಂಡಿದ್ದಾರೆ.
4 ಲೇನ್ ರಸ್ತೆ ಮಾಡಿದರೆ ಸಮಸ್ಯೆಗೆ ಪರಿಹಾರ:
ರಾಜ್ಯ ಹೆದ್ದಾರಿ 52 ಅನ್ನು 4 ಲೇನ್ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಅಥವಾ ಅದನ್ನು ಟನೇಷನಲ್ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಮತ್ತು ಅದನ್ನು 4 ಲೇನ್ ರಸ್ತೆಯನ್ನಾಗಿ ಮಾಡಿದ್ದಲ್ಲಿ ಸುಗಮ ವಾಹನ ಸಂಚಾರಕ್ಕೆ ಮತ್ತು ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ದಕ್ಷಿಣ ಕರ್ನಾಟಕದ ಈ ವಿಭಾಗಕ್ಕೆ ಸುರಂಗಮಾರ್ಗಗಳ ಅಗತ್ಯವಿದ್ದು ಈ ಭಾಗದಿಂದ ಬೆಂಗಳೂರಿಗೆ ಉತ್ತಮ ಸಂಪರ್ಕ ರಸ್ತೆಗಳಿಲ್ಲ. ಬಾಳೆಬಾರಿ ಘಾಟ್, ಅಗುಂಬೆ ಘಾಟ್, ಶಿರಡಿ ಘಾಟ್, ಚಾರ್ಮಡಿ ಘಾಟ್, ಸಂಪೇಕಟ್ಟೆ ಘಾಟ್, ನಾಗೋಡಿ ಇತ್ಯಾದಿ ಘಾಟ್ ವಿಭಾಗಗಳ ರಸ್ತೆಗಳು ಕಿರಿದಾಗಿದ್ದು, ಯಾವಾಗಲೂ ಟ್ರಾಫಿಕ್ ಜಾಮ್ ಇದ್ದು ವರ್ಷದುದ್ದಕ್ಕೂ ಸಮಸ್ಯೆಗಳನ್ನು ಎದುರಿಸುತ್ತಿವೆ.
ಈ ರಸ್ತೆ ಬೆಂಗಳೂರು, ಮಂತ್ರಾಲಯ, ಬಳ್ಳಾರಿ, ರಾಯಚೂರು, ಹೈದರಾಬಾದ್ನಂತಹ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ದಕ್ಷಿಣ ಪ್ರದೇಶಕ್ಕೆ ಪ್ರವಾಸೋದ್ಯಮವು ಉತ್ತೇಜನ ನೀಡುವ ಅವಕಾಶ ಹೊಂದಿದೆ.ಈ ರಸ್ತೆಗಳನ್ನು ಸುಧಾರಿಸಿದಲ್ಲಿ ದಕ್ಷಿಣ ಕನ್ನಡ ಅದರಲ್ಲೂ ವಿಶೇಷವಾಗಿ ಕುಂದಾಪುರ ಮತ್ತು ಬೈಂದೂರು ಕಡಲತೀರ ಪ್ರದೇಶ ಮತ್ತು ಈ ಪ್ರದೇಶದ ದೇವಾಲಯಗಳಿರುವ ಈ ಪ್ರದೇಶದಲ್ಲಿ ಪ್ರವಾಸೋದ್ಯಮವು ಉತ್ತೇಜನ ನೀಡಲಿದೆ ಎಂದವರು ಪತ್ರದಲ್ಲಿ ಬರೆದಿದ್ದಾರೆ.
ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ III (ಕೆಶಿಪ್ III) ಅಡಿಯಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ನಿಧಿಯಿಂದ ಈ ಪ್ರದೇಶದ ಸಮೀಪವಿರುವ ಎಲ್ಲಾ ಇತರ ರಾಜ್ಯ ಹೆದ್ದಾರಿಗಳನ್ನು 4 ಲೇನ್ಗಳಾಗಿ ಮೇಲ್ದರ್ಜೆಗೇರಿಸಲಾಗಿದ್ದು ರಾಜ್ಯ ಹೆದ್ದಾರಿ 52 ಹೊರತುಪಡಿಸಿದ್ದು ತಾರತಮ್ಯ ದೋರಣೆಯಾಗಿದೆ. ರಾಜ್ಯ ಸರ್ಕಾರವು ಏಷಿಯನ್ ಅಭಿವೃದ್ಧಿ ಬ್ಯಾಂಕ್, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ರಾಜ್ಯ ಹೆದ್ದಾರಿ 52 ಅನ್ನು ಸುಧಾರಿಸಲು BOT (Annuity) road projet ವಿಧಾನದ ಮೂಲಕ ಹಣಕಾಸು ಒದಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಿದೆ. ಈ ಎಲ್ಲಾ ಅಂಶಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ಆದಷ್ಟು ಶೀಘ್ರವಾಗಿ ಅಭಿವೃದ್ಧಿಪಡಿಸಲು ಅವರು ಮನವಿ ಮಾಡಿಕೊಂಡಿದ್ದಾರೆ.
ಆದಷ್ಟು ಶೀಘ್ರವೇ ಕಾಮಗಾರಿಗಳು ಯೋಜನೆಯಾಗಲಿ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಸಂಬಂಧಿತ ಪ್ರಾಧಿಕಾರಗಳಿಗೆ ಈ ಎಲ್ಲಾ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಬಗ್ಗೆ ಆದಷ್ಟು ಶೀಘ್ರವಾಗಿ ಈ ರಸ್ತೆಗಳ ಸುಧಾರಣೆ ಹಾಗೂ ದುರಸ್ಥಿ ಕಾಮಗಾರಿಗಳನ್ನು ಮಾಡುವ ಬಗ್ಗೆ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಇತರ ಇಲಾಖೆಗಳಿಗೆ ಸೂಚಿಸುವಂತೆ ಹಾಗೂ ರಾಷ್ಟ್ರೀಯ ರಸ್ತೆ ಪ್ರಾಧಿಕಾರಕ್ಕೆ ಸೂಕ್ತ ಮನವಿಯನ್ನು ರಾಜ್ಯದ ಮೂಲಕ ಸಲ್ಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯ ಮಂತ್ರಿ ಅವರಿಗೆ ಪತ್ರದ ಮೂಲಕ ಮಂಜುನಾಥ ಭಂಡಾರಿ ಅವರು ಮನವಿ ಮಾಡಿಕೊಂಡಿದ್ದಾರೆ.


















