ಜಪಾನ್ ನ ವಿಲ್ ಡಿಸೈನ್ ಸಂಸ್ಥೆಯ ಸಹಯೋಗದೊಂದಿಗೆ ನಿಟ್ಟೆಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸೈಬರ್ ಸೆಕ್ಯೂರಿಟಿ ವಿಭಾಗವು ಜಪಾನಿನ ವಿಲ್ ಡಿಸೈನ್ ಸಹಯೋಗದೊಂದಿಗೆ ಉತ್ಕೃಷ್ಟತಾ ಕೇಂದ್ರವನ್ನು ಕ್ಯಾಂಪಸ್ ನಲ್ಲಿ ಸ್ಥಾಪಿಸಿ ಸೆ.೧೫ ರಂದು ಅದನ್ನು ಉದ್ಘಾಟಿಸಲಾಯಿತು.

ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ನೇರ ಕಲಿಕೆಯನ್ನು ಬೆಳೆಸಲು ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಭಾಗವಹಿಸಿದ್ದರು. ವಿಲ್ ಡಿಸೈನ್ ಜಪಾನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೋಟಾಕಾ ತಗುಚಿ; ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿರೋಶಿ ನಕಯಾಮಾ, ಕಾರ್ಯನಿರ್ವಾಹಕ ವ್ಯವಸ್ಥಾಪಕರು ತಕಾಶಿ ತ್ಸುಜಿಯುಚಿ; ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ; ಮತ್ತು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ನಿಟ್ಟೆ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಹಯೋಗಗಳ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಅವರು ಸರ್ವರನ್ನೂ ಸ್ವಾಗತಿಸಿ ಜಪಾನಿನ ವಿವಿಧ ಸಂಸ್ಥೆಗಳೊಂದಿಗೆ ನಿಟ್ಟೆಯ ಸಹಯೋಗಗಳನ್ನು ಪರಿಚಯಿಸಿದರು.

ಅತಿಥಿಗಳು ನಿಟ್ಟೆ ಸಂಸ್ಥೆಯ ಹಾಗೂ ಅತಿಮುಖ್ಯವಾಗಿ ಸೈಬರ್ ಸೆಕ್ಯೂರಿಟಿ ವಿಭಾಗದ ಗಮನಾರ್ಹ ಉಪಕ್ರಮಗಳಿನ್ನು ಶ್ಲಾಘಿಸಿದರು ಮತ್ತು ವಿದ್ಯಾರ್ಥಿಗಳ ಉತ್ಸಾಹ ಮತ್ತು ಪ್ರತಿಭೆಯನ್ನು ಪ್ರಶಂಸಿಸಿದರು. ಪ್ರಯೋಗಾಲಯವು ಕಾಲೇಜಿನ ನಾವೀನ್ಯತೆ ಮತ್ತು ಉತ್ಕೃಷ್ಟತೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅತಿಥಿಗಳು ವಿಶ್ವಾಸ ವ್ಯಕ್ತಪಡಿಸಿದರು. ಈ ಸೌಲಭ್ಯದೊಂದಿಗೆ, ಸಂಸ್ಥೆಯು ಸೃಜನಶೀಲತೆ ಮತ್ತು ತಂತ್ರಜ್ಞಾನದಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಿದೆ.

ಸೈಬರ್ ಸೆಕ್ಯೂರಿಟಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಹಾಗೂ ಈ ಉತ್ಕೃಷ್ಟತಾ ಕೇಂದ್ರದ ಸಲಹೆಗಾರ ಡಾ. ರೋಶನ್ ಫರ್ನಾಂಡಿಸ್ ಅವರು ಔಪಚಾರಿಕ ವಂದನಾರ್ಪಣೆ ಮಾಡಿದರು. ಸೈಬರ್ ಸೆಕ್ಯುರಿಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ್ ಕಾಮತ್ ಕೆ.ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ಉತ್ಸಾಹಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.