ಧರ್ಮಸ್ಥಳ ಪ್ರಕರಣ: ಜಾಗ ಅಗೆತ ಮಾಹಿತಿಗೆ ಹೈಕೋರ್ಟ್ ತಾಕೀತು.

ಬೆಂಗಳೂರು: ‘ಧರ್ಮಸ್ಥಳ ಗ್ರಾಮದಲ್ಲಿ ನಾವು ಗುರುತಿಸಿರುವ ಸ್ಥಳಗಳಲ್ಲಿ ಕೂಡಲೇ ಅಗೆಯಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶನ ನೀಡಬೇಕು’ ಎಂದು ಕೋರಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಹೈಕೋರ್ಟ್‌ ರಾಜ್ಯ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದೆ.ಈ ಕುರಿತಂತೆ ಧರ್ಮಸ್ಥಳ ಗ್ರಾಮದ ಪಾಂಗಾಳ ಮನೆಯ ನಿವಾಸಿ ಪಾಂಡುರಂಗ ಗೌಡ (38) ಮತ್ತು ತುಕಾರಾಂ ಗೌಡ (48) ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಅರ್ಜಿದಾರರ ಪರ ಹಾಜರಾದ ದೆಹಲಿ ಹೈಕೋರ್ಟ್‌ ವಕೀಲ ದೀಪಕ್‌ ಖೋಸ್ಲಾ, ‘ಅರ್ಜಿದಾರರು ಎಸ್‌ಐಟಿಗೆ ಕಳೆದ ತಿಂಗಳ 29ರಂದು ಅರ್ಜಿ ಸಲ್ಲಿಸಿದ್ದು, ಧರ್ಮಸ್ಥಳದಲ್ಲಿ ನೂರಾರು ಅನಾಮಧೇಯ ಶವಗಳನ್ನು ಅಕ್ರಮವಾಗಿ ದಫನ್‌ ಮಾಡಿರುವ ಬಗ್ಗೆ ಸ್ಥಳಗಳನ್ನು ಗುರುತಿಸಿದ್ದಾರೆ. ಈ ಸ್ಥಳಗಳಲ್ಲಿ ಕೂಡಲೇ ಅಗೆತ ಶುರುಮಾಡಲು ಎಸ್‌ಐಟಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

ಖೋಸ್ಲಾ ಅವರ ವಾದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ಅರ್ಜಿದಾರರ ಪರ ವಕಾಲತ್ತನ್ನೇ ಸಲ್ಲಿಸಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಪರಿಶೀಲಿಸಿದ ನ್ಯಾಯಪೀಠ, ‘ಕಚೇರಿಯ ಆಕ್ಷೇಪಣೆಗಳನ್ನು ಪೂರೈಸಿ ಮತ್ತು ಪ್ರಾಸಿಕ್ಯೂಷನ್‌ಗೆ ಅರ್ಜಿಯ ಪ್ರತಿಯನ್ನು ನೀಡಿ’ ಎಂದು ಅರ್ಜಿದಾರರಿಗೆ ಆದೇಶಿಸಿತು. ಅಂತೆಯೇ, ಪ್ರಾಸಿಕ್ಯೂಷನ್‌ ಅರ್ಜಿದಾರರ ಮನವಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಬೇಕು’ ಎಂದು ಬಿ.ಎನ್‌.ಜಗದೀಶ್‌ ಅವರಿಗೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ನಾವು ಎಸ್‌ಐಟಿಗೆ ಆಗಸ್ಟ್‌ 29ರಂದು ನೀಡಿರುವ ಮನವಿಯನ್ನು ಪರಿಶೀಲಿಸಿ ಈ ಕೂಡಲೇ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು. ಅರ್ಜಿದಾರರು ತೋರಿಸುವ ಸ್ಥಳಗಳಲ್ಲಿ ಅಗೆಯಲು ಅನುವಾಗುವಂತೆ ಅರ್ಜಿದಾರರಿಗೆ ಜೊತೆಯಾಗಿ ನ್ಯಾಯಾಂಗ ರಿಜಿಸ್ಟ್ರಾರ್‌ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಕೋರ್ಟ್‌ ಕಮಿಷನರ್‌ ನೇಮಕ ಮಾಡಬೇಕು. ಮತ್ತು ಈ ಕುರಿತಾದ ತಥ್ಯಪೂರ್ಣವಾದ ವಾಸ್ತವಿಕ ವರದಿಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ’ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.