ಉಡುಪಿ: ಉಡುಪಿ ಕೃಷ್ಣಮಠದ ರಥಬೀದಿಯಲ್ಲಿ ನಡೆದ ವೈಭವದ ವಿಟ್ಲಪಿಂಡಿ ಉತ್ಸವದಲ್ಲಿ ವಿವಿಧ ವೇಷಧಾರಿಗಳ ನಡುವೆ ಆರ್ ಸಿಬಿ ಸಂಭ್ರಮಾಚರಣೆಯೂ ನಡೆಯಿತು. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ರೋಮರಿಯೋ ಶೆಫರ್ಡ್, ಡ್ಯಾನಿಷ್ ಶೇಟ್ ವೇಷಧಾರಿಗಳು ಟ್ರೋಫಿ ಹಿಡಿದು ಜನರತ್ತ ಕೈ ಬೀಸಿ ಆರ್ ಸಿಬಿ ವಿಜಯೋತ್ಸವ ನಡೆಸಿದರು.
ಸಂಪ್ರದಾಯಬದ್ಧ ಹುಲಿ ವೇಷ, ಕಪ್ಪೆ ವೇಷದ ಜೊತೆಗೆ ಈ ಬಾರಿ ಕ್ರಿಕೆಟ್ ಅಭಿಮಾನಿಗಳ ಸೃಜನಶೀಲತೆಯೂ ಮಿಂಚಿತು. ಆರ್ಸಿಬಿ ಜರ್ಸಿ, ಬ್ಯಾಟ್, ಬಾಲ್ ಹಿಡಿದಂತೆ ಹಾಗೂ ಕಪ್ ಪ್ರದರ್ಶಿಸಿದ ವೇಷಧಾರಿಗಳು ಪ್ರೇಕ್ಷಕರ ಗಮನ ಸೆಳೆಯುತ್ತಾ ಕ್ರಿಕೆಟ್ ಪ್ರೀತಿಯನ್ನು ಹಬ್ಬಿಸಿದರು.
ಜನಸ್ತೋಮದಲ್ಲಿ ಹಲವರು ವೇಷಧಾರಿಗಳ ಜೊತೆ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಉಡುಪಿಯ ಪರಂಪರೆಯ ಹಬ್ಬಕ್ಕೆ ಈ ಕ್ರಿಕೆಟ್ ಕಳೆ ಸೇರಿ, ಆರ್ಸಿಬಿ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು.












