ಉಡುಪಿ:ಸಂವಿಧಾನ ಬದ್ಧ ಹಕ್ಕುಗಳ ಬಗ್ಗೆ ಅರಿವಿರಲಿ: ಜಿಲ್ಲಾಧಿಕಾರಿ ಸ್ವರೂಪ ಟಿ ಕೆ

ಉಡುಪಿ: ಜನರಲ್ಲಿ ಸಂವಿಧಾನ ಬದ್ಧ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲು ಅಂತರರಾಷ್ಟ್ರೀಯ
ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಜನಸಾಮಾನ್ಯರಿಗೆ ಪ್ರಜಾಪ್ರಭುತ್ವದ ಶಕ್ತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಬೈಕ್ ಜಾಥಾ, ಛಾಯಾಚಿತ್ರ, ಚಿತ್ರಕಲೆ, ಭಾಷಣ ಸ್ಪರ್ಧೆ ಮತ್ತು ಸೈಕಲ್ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ. ಸಂವಿಧಾನದ ಬಗ್ಗೆ ಅರಿವು ಇದ್ದಾಗ
ಶಿಸ್ತು ಬದ್ಧ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಹೇಳಿದರು.

ಅವರು ಸೋಮವಾರ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಉದ್ಘಾಟಿಸಿ, ಸೈಕಲ್ ಜಾಥಾಗೆ ಚಾಲನೆ ನೀಡಿ, ಸಂವಿಧಾನ ಪೀಠಿಕೆ ಪ್ರತಿಜ್ಞೆ ಬೋಧಿಸಿ ಮಾತನಾಡಿದರು.

ನನ್ನ ಮತ ನನ್ನ ಹಕ್ಕು, ಗಾಂಧೀ ಭಾರತ, ಸಂವಿಧಾನ ಪೀಠಿಕೆ ಬಗ್ಗೆ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಂಡು ಬೈಕ್ ರ‍್ಯಾಲಿ ಮತ್ತು ಸೈಕಲ್ ರ‍್ಯಾಲಿಗಳ ಮೂಲಕ ಜನರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಸಂವಿಧಾನದ ಬಗ್ಗೆ ಅರಿತುಕೊಳ್ಳಬೇಕು. ನಮ್ಮದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಇದನ್ನು ಸದೃಢಗೊಳಿಸಲು ಪ್ರತಿಯೊಬ್ಬರೂ
ಕೈಜೋಡಿಸಬೇಕಿದೆ ಎಂದರು.

ಸೈಕಲ್ ರ‍್ಯಾಲಿಯು ಜಿಲ್ಲಾ ಕ್ರೀಡಾಂಗಣದಿಂದ ಹೊರಟು ಸಿಟಿ ಬಸ್‌ ಸ್ಟ್ಯಾಂಡ್, ಕಡಿಯಾಳಿ, ಎಂ.ಜಿ.ಎಂ ಕಾಲೇಜು ಮಾರ್ಗವಾಗಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ತಲುಪಿ ಮರಳಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್ ಎಸ್ ಕದ್ರೋಳಿ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಸೈಕಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ ಗುರುರಾಜ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ ರೋಷನ್‌ ಕುಮಾರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.