ಉಡುಪಿ:ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯವು ಇಂದಿನಿಂದ (ಸೆಪ್ಟಂಬರ್ 15) 45 ದಿನಗಳ ಕಾಲ ನಡೆಯಲಿದ್ದು, ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಲಿಂಗತ್ವ ಅಲ್ಪಸಂಖ್ಯಾತರು ಸಮೀಕ್ಷೆಯಲ್ಲಿ ಬಿಟ್ಟು ಹೋಗದಂತೆ ಸಮೀಕ್ಷಾ
ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಮೀಕ್ಷಾದಾರರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬೇಸ್ ಲೈನ್ ಸರ್ವೇ ನಡೆಸುವ ಕುರಿತು ನಡೆದ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಮುಂದಿನ ದಿನಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಲಭ್ಯವಿರುವ ಯೋಜನೆ ಹಾಗೂ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ಹಾಗೂ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲು ಈ ಸಮೀಕ್ಷೆಯು ಅನುಕೂಲವಾಗಲಿದೆ ಎಂದರು.

ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಸೆ. 15 ರಿಂದ ಒಟ್ಟು 45 ದಿನಗಳ ಕಾಲ ನಡೆಯಲಿದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರನ್ನೇ ಸಮೀಕ್ಷಾ ಕಾರ್ಯಕ್ಕಾಗಿ ನೇಮಿಸಲಾಗಿದ್ದು, ಈಗಾಗಲೇ ಸಮೀಕ್ಷೆಗೆ
ಗುರುತಿಸಲಾಗಿರುವ ಮೂವರು ಸಮೀಕ್ಷೆದಾರರಿಗೆ ಬೆಂಗಳೂರಿನಲ್ಲಿ ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ ತರಬೇತಿ ನೀಡಲಾಗಿದೆ ಎಂದರು.

ಸಮೀಕ್ಷಾ ಕಾರ್ಯಕ್ಕಾಗಿ ಉಡುಪಿಯ ಜಿಲ್ಲಾ ಆಸ್ಪತ್ರೆ, ಕಾರ್ಕಳ ಹಾಗೂ ಕುಂದಾಪುರದ ತಾಲೂಕು ಆಸ್ಪತ್ರೆಗಳಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲಾಗಿದೆ ಎಂದ ಅವರು, ಸಮೀಕ್ಷೆ ಕಾರ್ಯವನ್ನು ಮೊಬೈಲ್ ಆಪ್ ಮೂಲಕ ಟ್ಯಾಬ್‌ಗಳಲ್ಲಿ ಕೈಗೊಳ್ಳಲಿದ್ದು, ಇದರಲ್ಲಿ ಸುಮಾರು 150 ಪ್ರಶ್ನಾವಳಿಗಳಿದ್ದು, ಲಿಂಗತ್ವ ಅಲ್ಪಸಂಖ್ಯಾತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಸ್ಪಷ್ಟ ಹಾಗೂ ನಿಖರ ಮಾಹಿತಿ ನೀಡಬೇಕು
ಎಂದರು.

ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ 97 ಫಲಾನುಭವಿಗಳು, ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿಯನ್ನು 61 ಫಲಾನುಭವಿಗಳು, ಗೃಹಲಕ್ಷ್ಮಿ ಯೋಜನೆಯಡಿ 35 ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮೈತ್ರಿ ಯೋಜನೆಯಡಿ 44 ಅರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದು, ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಶ್ರೇಯೋಭಿವೃದ್ಧಿಗೆ ಸರಕಾರ ಹಲವು
ಯೋಜನೆಗಳನ್ನು ರೂಪಿಸಿದೆ. ಇವುಗಳ ಪ್ರಯೋಜನವನ್ನು ಪ್ರತಿಯೊಬ್ಬ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಸಮೀಕ್ಷೆ ಕುರಿತ ಪೋಸ್ಟರ್‌ಗಳನ್ನು ಹಾಗೂ ಸಮೀಕ್ಷಾದಾರರಿಗೆ ಟ್ಯಾಬ್‌ಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.