ಉಡುಪಿ: ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಕಳೆಗಟ್ಟಿದೆ. ಇಂದು ವಿಟ್ಲಪಿಂಡಿ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣಮಠಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿದರು.
ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮೇಲೈಸಿದ್ದವು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಭಕ್ತರು ಬೆಳಗ್ಗಿನಿಂದಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು, ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕಣ್ಣುಂಬಿಕೊಂಡರು. ರಥಬೀದಿ ಹಾಗೂ ಕೃಷ್ಣಮಠವನ್ನು ಹೂವು, ವಿದ್ಯುತ್‌ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಪರ್ಯಾಯ ಪುತ್ತಿಗೆ ಮಠದ ಸುಶ್ರೀಂದ್ರತೀರ್ಥ ಸ್ವಾಮೀಜಿ ಕೃಷ್ಣನಿಗೆ ಬಾಲಗೋಪಾಲ ಅಲಂಕಾರ ಮಾಡಿದ್ದರು. ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ದೇವರಿಗೆ ಮಹಾಪೂಜೆ ನಡೆಸಿದರು.
ರಥಬೀದಿಯುದ್ದಕ್ಕೂ ಹೂವು, ಆಟಿಕೆ ಸಾಮಗ್ರಿಗಳ ಮಾರಾಟ ಗರಿಗೆದರಿತ್ತು, ಹುಲಿವೇಷ ಸೇರಿದಂತೆ ವಿವಿಧ ವೇಷಧಾರಿಗಳು ಪ್ರದರ್ಶನ ನೀಡುವ ಮೂಲಕ ಜನರ ಗಮನ ಸೆಳೆದರು.
ಜನ್ಮಾಷ್ಟಮಿ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಚಿಣ್ಣರಿಗೆ ಹಮ್ಮಿಕೊಂಡಿದ್ದ ಮುದ್ದು ಕೃಷ್ಣ ಸ್ಪರ್ಧೆಯು ಹಬ್ಬಕ್ಕೆ ಕಳೆ ತಂದುಕೊಟ್ಟಿತ್ತು. ಕೃಷ್ಣನ ವೇಷ ತೊಟ್ಟು ಕೊಳಲು ಮೊಸರಿನ ಗಡಿಗೆ ಹಿಡಿದು ಅತ್ತಿತ್ತ ಓಡಾಡುವ ಮಕ್ಕಳು ಜನರಿಗೆ ಮುದ ನೀಡಿದರು. ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕಿರಿಯ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರು ವೇದಿಕೆಗೆ ಬಂದು ಮಕ್ಕಳನ್ನು ಹರಸಿದರು.












