ಸೆಪ್ಟೆಂಬರ್ 14 ರಂದು ಮಲ್ಪೆ ಬೀಚ್‌ನಲ್ಲಿ ಉಡುಪಿದ ಪಿಲಿನಲಿಕೆ ಕಾರ್ಯಕ್ರಮ

ಉಡುಪಿ; ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಲ್ಪೆ ಕೊಳ ಫ್ರೆಂಡ್ಸ್ ವತಿಯಿಂದ ಸೆಪ್ಟೆಂಬರ್ 14 ರಂದು ಮಲ್ಪೆ ಬೀಚ್‌ನಲ್ಲಿ ಮೂರನೇ ವರ್ಷದ ‘ಉಡುಪಿದ ಪಿಲಿನಲಿಕೆ -2025’ ಕಾರ್ಯಕ್ರಮ ಮಲ್ಪೆ ಬೀಚ್‌ನಲ್ಲಿ ನಾಡೋಜ ಡಾ. ಜಿ. ಶಂಕರ್ ವೇದಿಕೆಯಲ್ಲಿ ನಡೆಯಲಿದೆ ಎಂದು ಆಯೋಜಕರಾದ ವಿವೇಕ್ ಜಿ. ಸುವರ್ಣ ಹೇಳಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಕಲೆ, ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಯನ್ನು ವೈಭವೀಕರಿಸುವುದು ಈ ಕಾರ್ಯಕ್ರಮದ ಉದ್ದೇಶ. ಸಾಂಪ್ರದಾಯಿಕ ಹುಲಿವೇಷದ ಈ ಪ್ರದರ್ಶನವು ಉಡುಪಿ ಶೈಲಿಯ ಬಣ್ಣ, ಜಟ್ಟಿ ಮತ್ತು ಟೊಪ್ಪಿಗೆ ವಿಶೇಷ ಆದ್ಯತೆ ನೀಡಲಿದೆ.

ಸ್ಪರ್ಧೆಯಲ್ಲಿ ಪ್ರಥಮ ₹1,00,000 ನಗದು ಬಹುಮಾನ ಮತ್ತು ದ್ವಿತೀಯ ಬಹುಮಾನ ₹50,000 ನಗದು ಬಹುಮಾನ ನೀಡಲಾಗುವುದು. ಅಲ್ಲದೆ, ಉಡುಪಿ ಶೈಲಿಯ ಉತ್ತಮ ಬಣ್ಣ, ತಾಸೆ, ಮರಕಾಲು ಕುಣಿತ, ವೈಯಕ್ತಿಕ ಕುಣಿತ, ಮತ್ತು ಮುಡಿ ಎಸೆತ ವಿಭಾಗಗಳಲ್ಲಿ ವಿಜೇತರಿಗೆ ವಿಶೇಷ ₹10,000 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ಈ ಕಾರ್ಯಕ್ರಮವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಶಾಸಕ ಯಶ್ವಾಲ್ ಆನಂದ್ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿಗಳಾದ ಆನಂದ್ ಸಿ. ಕುಂದರ್, ಸಾಧು ಸಾಲಿಯಾನ್, ಕಿರಣ್ ಚಂದ್ರ ಪುಷ್ಪಗಿರಿ, ಶರತ್ ಕೆಜೆ, ಪ್ರಸಾದ್ ರಾಜ್ ಕಾಂಚನ್ ಹಾಗೂ ಉಡುಪಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಉಡುಪಿ ನಗರಸಭಾ ವಿರೋಧಪಕ್ಷ ನಾಯಕರಾದ ರಮೇಶ್ ಕಾಂಚನ್, ಪಾಂಡುರಂಗ ಮಲ್ಪೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಯೋಜಕರಾದ ಗಣೇಶ್ ಸಾಲಿಯಾನ್, ಮಂಜುನಾಥ್ ಸಾಲಿಯಾನ್ ಕೊಳ, ಸಂತೋಷ್ ಕೊಳ ಉಪಸ್ಥಿತರಿದ್ದರು.