ಉಡುಪಿ: ಸೆ.15ರಂದು ಮುಂಬೈಯ ಅಲಾರೆ ಗೋವಿಂದ ತಂಡದಿಂದ 10 ಕಡೆ ಮಡಿಕೆ ಒಡೆಯುವ ಪ್ರದರ್ಶನ

ಉಡುಪಿ: ಶ್ರೀ ಸಾಯಿಲಕ್ಷ್ಮೀ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮುಂಬಯಿ ಬಾಲಮಿತ್ರ ವ್ಯಾಯಾಮ ಶಾಲೆಯ 200 ಮಂದಿ ಸದಸ್ಯರ ಅಲಾರೆ ಗೋವಿಂದ ತಂಡವು ಸೆ.15ರಂದು ವಿಟ್ಲಪಿಂಡಿ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣಮಠದ ಕನಕಗೋಪುರದ ಎದುರು ಸಹಿತ ನಗರದ 10 ಕಡೆ 50 ಅಡಿ ಎತ್ತರದ ಮಡಿಕೆ ಒಡೆಯುವ ಪ್ರದರ್ಶನ ನೀಡಲಿದ್ದಾರೆ ಎಂದು ಸಹ ಸಂಯೋಜಕ ಸಂತೋಷ ಡಿ. ಸುವರ್ಣ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.15ರಂದು ಬೆಳಗ್ಗೆ 9.30ಕ್ಕೆ ಶ್ರೀ ಕೃಷ್ಣಮಠದ ಕನಕಗೋಪುರದ ಎದುರು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಲಾರೆ ಗೋವಿಂದ ಮಡಿಕೆ ಒಡೆಯುವ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

10.30ಕ್ಕೆ ಕುಂಜಿಬೆಟ್ಟುವಿನ ಏತರ್‌ ಶೋರೂಂ ಎದುರು, 11ಕ್ಕೆ ನಂದಾ ಗೋಲ್ಡ್‌ ಎದುರು, 11.30ಕ್ಕೆ ಸಂಸ್ಕೃತ ಕಾಲೇಜು ಬಳಿಯ ವಿ.ಕೆ.ಪ್ಯಾರಡೈಸ್‌ ಎದುರು, 12ಕ್ಕೆ ಡೆಂಟಾ ಕೇರ್ ಸರ್ಕಲ್‌ ಎದುರು, 12.30ಕ್ಕೆ ಮಿತ್ರಪ್ರಿಯ ಆಸ್ಪತ್ರೆ ಬಳಿಯ ಗಿರಿಜಾ ಸರ್ಜಿಕಲ್ ಎದುರು, ಮಧ್ಯಾಹ್ನ 2ಕ್ಕೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣ, 3ಕ್ಕೆ ಆದಿ ಉಡುಪಿ ಜಂಕ್ಷನ್, 4ಕ್ಕೆ ಮಿಷನ್‌ ಕಾಂಪೌಂಡ್‌ ಬಳಿ, 5ಕ್ಕೆ ಅಂಬಾಗಿಲು ಆದರ್ಶ ಬೇಕರಿ ಎದುರು ಪ್ರದರ್ಶನ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಮಧುಸೂದನ ಪೂಜಾರಿ ಕೆಮ್ಮಣ್ಣು, ಸಹ ಸಂಯೋಜಕ ಜಯ ಪೂಜಾರಿ, ಸಮಿತಿ ಸದಸ್ಯ ಸುಧಾಕರ್ ಕೋಟ್ಯಾನ್ ಇದ್ದರು.