ಹಾಸನ: ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಹಾಸನದಲ್ಲಿ ಭೀಕರ ದುರಂತ ಸಂಭವಿಸಿದೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದಿದ್ದು, ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರಲ್ಲಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, 6 ಮಂದಿ ಸ್ಥಳೀಯರಾಗಿದ್ದಾರೆ. 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಗಾಯಗೊಂಡಿರುವವರೆಗ ಚಿಕಿತ್ಸೆ ಮುಂದುವರೆದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತಪಟ್ಟವರ ವಿವರ:
- ಪ್ರವೀಣ್ ಕುಮಾರ್, ಅಂತಿಮ ಬಿಇ ವಿದ್ಯಾರ್ಥಿ, ಬಳ್ಳಾರಿ
- ರಾಜೇಶ ಬಿನ್ ಮೂರ್ತಿ 17 ವರ್ಷ ಕೆ.ಬಿ.ಪಾಳ್ಯ, ಹಳೆಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು
- ಈಶ್ವರ ಬಿನ್ ರವಿಕುಮಾರ (17) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ ತಾಲೂಕು
- ಗೋಕುಲ ಬಿನ್ ಸಂಪತ್ ಕುಮಾರ್ (17) ಮುತ್ತಿಗೆಹೀರಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು
- ಕುಮಾರ ಬಿನ್ ತಿಮ್ಮಯ್ಯ (25 ) ಕಬ್ಬಿನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.
- ಪ್ರವೀಣ ಬಿನ್ ಹನುಮಯ್ಯ (25) ಕಬ್ಬಿನಹಳ್ಳಿ ಗ್ರಾಮ ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.
- ಮಿಥುನ್ ಬಿನ್ ವಿಜಯ್ (23) ಗವಿಗಂಗಾಪುರ ಗ್ರಾಮ, ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ.
- ಸುರೇಶ ಬಿನ್ ರಮೇಶ ಬಿಇ ವಿದ್ಯಾರ್ಥಿ ಮಣೆನಹಳ್ಳಿ ಮರ್ಲೆ ಗ್ರಾಮ, ಚಿಕ್ಕಮಗಳೂರು ಜಿಲ್ಲೆ
- ಪ್ರಭಾಕರ್ (55) ಬಂಟರಹಳ್ಳಿ, ಹಾಸನ ತಾಲ್ಲೂಕು
ಪ್ರಧಾನಿ ಮೋದಿ ಸಂತಾಪ:
ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ಘನಘೋರ ದುರಂತದಲ್ಲಿ ಮೃತಪಟ್ಟವರ ನೆನೆದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಪ್ರಧಾನಿ ಕಚೇರಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವುದು ನಿಜಕ್ಕೂ ಹೃದಯವಿದ್ರಾವಕ ಘಟನೆ. ಈ ದುರಂತದಲ್ಲಿ ಹಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಕನಿಕರವಿದೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ದುರಂತ ಬಗ್ಗೆ ಸಿಎಂ ಮತ್ತು ಡಿಸಿಎಂ ಸೇರಿದಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಘಾತ ವ್ಯಕ್ತಪಡಿಸಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

















