ನೇಪಾಳ ಜೈಲುಗಳಿಂದ ತಪ್ಪಿಸಿಕೊಂಡು ಅಕ್ರಮವಾಗಿ ಪ್ರವೇಶಿಸಿದ 35 ಕೈದಿಗಳನ್ನು ಬಂಧಿಸಿದ ಭಾರತ!

ನವದೆಹಲಿ: ನೇಪಾಳದಲ್ಲಿ ಇತ್ತೀಚೆಗೆ ನಡೆದ ಯುವಜನರ ಭಾರೀ ಪ್ರತಿಭಟನೆಯಿಂದಾಗಿ ವಿವಿಧ ಜೈಲುಗಳಿಂದ ತಪ್ಪಿಸಿಕೊಂಡು ಅಕ್ರಮವಾಗಿ ಭಾರತ ಪ್ರವೇಶಿಸಿದ 35 ಕೈದಿಗಳನ್ನು ಸಶಸ್ತ್ರ ಸೀಮಾ ಬಲ್(ಎಸ್‌ಎಸ್‌ಬಿ) ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ದೃಢಪಡಿಸಿದ್ದಾರೆ.

22 ಕೈದಿಗಳನ್ನು ಉತ್ತರ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ, 10 ಮಂದಿಯನ್ನು ಬಿಹಾರದಲ್ಲಿ ಮತ್ತು ಮೂವರನ್ನು ಪಶ್ಚಿಮ ಬಂಗಾಳದಲ್ಲಿ ಸೆರೆಹಿಡಿಯಲಾಗಿದೆ. ಈ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಈ ಕೈದಿಗಳನ್ನು ಭಾರತ-ನೇಪಾಳ ಗಡಿಯಾದ್ಯಂತ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಇರಿಸಿದ್ದಾರೆ ಎಂದು ಎಎನ್‌ಐಗೆ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಎಲ್ಲಾ ಗಡಿ ಪ್ರವೇಶ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಮುಂದುವರಿದಿರುವುದರಿಂದ ಬಂಧಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ನೇಪಾಳದಲ್ಲಿ ಜೈಲಿನಲ್ಲಿದ್ದ ಕೈದಿಗಳು ಸಾಮೂಹಿಕವಾಗಿ ಹೊರಬಂದ ವರದಿಗಳ ನಂತರ ಎಸ್‌ಎಸ್‌ಬಿ ತೀವ್ರ ಕಟ್ಟೆಚ್ಚರ ವಹಿಸಿದೆ.

ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಸ್‌ಎಸ್‌ಬಿ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂಗೆ ಹೊಂದಿಕೊಂಡಂತೆ 1,751 ಕಿ.ಮೀ ಉದ್ದದ ಭಾರತ-ನೇಪಾಳ ಗಡಿಯನ್ನು ಸುರಕ್ಷಿತವಾಗಿರಿಸುವ ಜವಾಬ್ದಾರಿಯನ್ನು ಹೊಂದಿದೆ.