ಉಡುಪಿ: ಸಿಂಡಿಕೇಟ್ ಬ್ಯಾಂಕಿನ ಶತಮಾನೋತ್ಸವ ಆಚರಣೆಯನ್ನು ಸೆ. 13 ಮತ್ತು 14ರಂದು ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಜಿಎಂ ಕೆ.ಟಿ. ರೈ ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ನೇ ವರ್ಷವು ಸಿಂಡಿಕೇಟ್ ಬ್ಯಾಂಕಿನ ಶತಮಾನೋತ್ಸವ ವರ್ಷವಾಗಿದ್ದು, ಈ ಮೈಲಿಗಲನ್ನು ಸ್ಮರಿಸುವ ಉದ್ದೇಶದಿಂದ ಸಿಂಡಿಕೇಟ್ ಬ್ಯಾಂಕಿನ ಮಾಜಿ ಉದ್ಯೋಗಿಗಳು ಜೊತಗೂಡಿ ಈ ಎರಡು ದಿನಗಳ ಕಾಲ ಉಡುಪಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದರು.
ಸೆ.13ರಂದು ಸಂಜೆ 4 ಗಂಟೆಗೆ ಬ್ಯಾಂಕ್ ನ ಸಂಸ್ಥಾಪಕರಿಗೆ ಗೌರವ ಮತ್ತು ಅವರ ಸಂಬಂಧಿಕರನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಸೆ. 14ರಂದು ಸ್ಮರಣಾರ್ಥ ಅಧಿವೇಶನ ನಡೆಯಲಿದೆ. ಇದರಲ್ಲಿ ಗಣ್ಯ ವ್ಯಕ್ತಿಗಳು ಮತ್ತು ಮಾಜಿ ಉದ್ಯೋಗಿಗಳು ಸಿಂಡಿಕೇಟ್ ಬ್ಯಾಂಕಿನ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಮತ್ತು ಅದರ ಸಂಸ್ಥಾಪಕರಿಗೆ ಗೌರವ ಸಲ್ಲಿಸಲು ದೇಶಾದ್ಯಂತದ ಸಿಂಡಿಕೇಟ್ ಬ್ಯಾಂಕಿನ 600ಕ್ಕೂ ಅಧಿಕ ಮಾಜಿ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ನ ಮಾಜಿ ಉದ್ಯೋಗಿಗಳಾದ ಸುಜಿರ್ ಪ್ರಭಾಕರ್, ಜಯರಾಮ್ ವಿ ಪ್ರಭು, ದಿನಕರ ಪೂಂಜಾ, ಸಂಜಯ್ ಮಂಜೇಕರ್ ಇದ್ದರು.












