ಉಡುಪಿ, ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ಸಹಯೋಗದಲ್ಲಿ 9 ಸೆಪ್ಟೆಂಬರ್ 2025 ರಂದು “ಸಾಫ್ಟ್ ಸ್ಕಿಲ್ ಮತ್ತು ಕಮ್ಯುನಿಕೇಶನ್ ಸ್ಕಿಲ್” ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ಇದರ ವಿಶೇಷ ಅಧಿಕಾರಿಯಾದ ಡಾ. ದಾಮೋದರ ನಾರಲ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂವಹನ ಹಾಗೂ ಅಂತರ ವ್ಯಕ್ತಿತ್ವ ಕೌಶಲ್ಯಗಳ ಅಗತ್ಯತೆ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಡೀನ್ ಡಾ. ಸುದರ್ಶನ ರಾವ್ ವಹಿಸಿ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಂಸ್ಥೆಯ ಬದ್ಧತೆಯನ್ನು ವಿವರಿಸಿದರು. ಕಾರ್ಯಗಾರದಲ್ಲಿ ಖ್ಯಾತ ವಕ್ತಾರರು ಹಾಗೂ ಪರಿಣಿತರಾದ ಡಾ. ದಿವಾಕರ್ ಪಿ, ಮಾನವಿಕ ಶಾಸ್ತ್ರ ವಿಭಾಗ, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಮತ್ತು ಭಾಸ್ಕರ್ ಪೈ, ಸ್ವತಂತ್ರ ಸಲಹೆಗಾರ ಹಾಗೂ ಮಾಜಿ ಮುಖ್ಯ ಅಧಿಕಾರಿ ಸೌತ್ ಏಷ್ಯಾ, ಇವರು ಭಾಗವಹಿಸಿ ಮೌಖಿಕ ಸಂವಹನ, ಭಾವನಾತ್ಮಕ ಬುದ್ಧಿಮತ್ತೆ, ವೃತ್ತಿಪರ ನಡವಳಿಕೆ ಹಾಗೂ ಉದ್ಯೋಗಸ್ಥಳದ ಸಿದ್ದತೆ ಎಂಬ ಪ್ರಮುಖ ವಿಷಯಗಳ ಕುರಿತು ಆಳವಾದ ಮಾಹಿತಿಯನ್ನು ನೀಡಿದರು.
ಈ ಕಾರ್ಯಗಾರವು ತಾಂತ್ರಿಕ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವತ್ತ ದಾರಿ ಮಾಡಿಕೊಟ್ಟಿದೆ ಹಾಗೂ ಶಿಕ್ಷಣ ಸಂಸ್ಥೆಗಳು ಹಾಗೂ ವೈಯಕ್ತಿಕ ಅಭ್ಯಾಸಕರಿಗಾಗಿ ರೂಪುಗೊಂಡ ವೇದಿಕೆಯಾಗಿದೆ.
ಈ ಕಾರ್ಯಗಾರದ ಮುಖ್ಯ ಉದ್ದೇಶವು ಮೂಲಭೂತ ಸಂವಹನ ಕೌಶಲ್ಯಗಳನ್ನು ಬಲಪಡಿಸುವುದು, ಉದ್ಯೋಗಸ್ಥಳದಲ್ಲಿ ಯಶಸ್ಸು ಸಾಧಿಸಲು ಅಗತ್ಯವಿರುವ ಮೃದು ಕೌಶಲಗಳನ್ನು ಬೆಳೆಸುವುದು, ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಸಿದ್ದತೆಯ ನಡುವಿನ ಅಂತರವನ್ನು ಕಡಿಮೆಗೊಳಿಸುವುದು ಹಾಗೂ ಅಕಾಡೆಮಿ ಮತ್ತು ಉದ್ಯಮ ಕ್ಷೇತ್ರದಿಂದ ತಜ್ಞರ ಅನಿಸಿಕೆಗಳನ್ನು ಒದಗಿಸುವುದಾಗಿದೆ.












