ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಅಶಕ್ತ ಕುಟುಂಬದ ವೈದ್ಯಕೀಯ ನೆರವಿಗಾಗಿ ಪ್ರಥಮ ಬಾರಿಗೆ ವಿಭಿನ್ನ ವೇಷ ಧರಿಸಿ ಮನೆ ಮನೆಗೆ ತೆರಳಿ ಸುಷ್ಮಾ ಬಂಟ್ವಾಳ ಅವರು ಧನ ಸಂಗ್ರಹಿಸಲು ಮುಂದಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸುಷ್ಮಾ ಬಂಟ್ವಾಳ ಅವರು, 76 ಬಡಗಬೆಟ್ಟು ನಿವಾಸಿಗಳಾದ ಜಯಕರ ಬಂಗೇರ ಮತ್ತು ವಿಜಯಲಕ್ಷ್ಮೀ ಬಂಗೇರ ಅವರ ಇಬ್ಬರು ಮಕ್ಕಳಾದ ಕಿಶನ್ ಬಂಗೇರ ಮತ್ತು ಕಿರಣಾ ಬಂಗೇರ 9ನೇ ತರಗತಿವರೆಗೆ ಸಹಜವಾಗಿ ಎಲ್ಲರಂತೆ ಶಾಲೆಗೆ ಹೋಗಿ ಬರುತ್ತಿದ್ದರು. 14ನೇ ವರ್ಷಕ್ಕೆ ಬಂದ ಅನಂತರ ಅವರ ಕೈ, ಕಾಲು ಸ್ವಾಧೀನ ಕಳೆದುಕೊಳ್ಳಲು ಆರಂಭಿಸಿದೆ. ಅವರ ವೈದ್ಯಕೀಯ ವೆಚ್ಚ ಭರಿಸಲಾಗದೆ ಮನೆಯನ್ನು ಮಾರಾಟ ಮಾಡಿ ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.ಅಲ್ಲದೆ ಜಯಕರ ಬಂಗೇರ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರಿಗೂ ಕೆಲಸ ಮಾಡಲಾಗದಂತಹ ಪರಿಸ್ಥಿತಿ ಇದೆ. ಕಿಡ್ನಿ ವೈಫಲ್ಯ ಸಮಸ್ಯೆಯಿಂದ ವಾರಕ್ಕೊಮ್ಮೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆಯಿದೆ. ಈ ಮೂವರ ಜವಾಬ್ದಾರಿ ಈಗ ವಿಜಯಲಕ್ಷ್ಮೀ ಅವರ ಮೇಲಿದ್ದು, ಅವರಿಗೆ ನೆರವು ನೀಡುವ ಉದ್ದೇಶದಿಂದ ವೇಷಧರಿಸಿ ಧನಸಂಗ್ರಹ ಮಾಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಸೆ.14ರಂದು ವಿಭಿನ್ನ ವೇಷ ಧರಿಸಿ ಮನೆ ಮನೆಗೆ ತೆರಳಿ ಸಹಾಯಧನ ಸಂಗ್ರಹಿಸಿ ವಿಜಯಲಕ್ಷ್ಮೀ ಬಂಗೇರ ಅವರ ಕುಟುಂಬಕ್ಕೆ ನೀಡುವ ಗುರಿ ಹೊಂದಲಾಗಿದೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರೂಪಕಿ ಮಾಲತಿ ಆಚಾರ್ಯ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಇದ್ದರು.












