ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುರ್ಖಾ ಹಾಕಿಕೊಂಡು ತನಿಖೆ ನಡೆಸುವ ಬದಲು ರಾಜಧರ್ಮ ಪಾಲನೆ ಮಾಡಲಿ ಎಂದು ಟೀಕಿಸಿರುವ ಮಾಜಿ ಸಚಿವ ವಿ.ಸುನಿಲ್ ಕುಮಾರ್, ಕಾಂಗ್ರೆಸ್ ಸರಕಾರ ಬಂದ ಅನಂತರ ಮಂಡ್ಯ ಜಿಲ್ಲೆ ಜೆಹಾದಿ ಚಟುವಟಿಕೆಗಳ ಪ್ರಯೋಗ ಶಾಲೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಇದರಿಂದಾಗಿ ಈ ಸರಕಾರದ ಆದ್ಯತೆ ಏನೆಂಬುದು ಸ್ಪಷ್ಟವಾಗಿದೆ. ಕಲ್ಲು ಹೊಡೆಯುವವರನ್ನು ಸಿದ್ದರಾಮಯ್ಯ ಸರಕಾರ ಬೆಂಬಲಿಸುತ್ತ ಬಂದಿದೆ. ಇದರ ಪರಿಣಾಮವೇ ಮದ್ದೂರು ಘಟನೆ. ಎಂದಿನಂತೆ ಸಿದ್ದರಾಮಯ್ಯ ಹಿಂದೂ ಕಾರ್ಯಕರ್ತರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಬುರ್ಖಾ ಹಾಕಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಮುಖ್ಯಮಂತ್ರಿಯವಾದವರು ರಾಜಧರ್ಮ ಪಾಲನೆ ಮಾಡಬೇಕೇ ವಿನಾ ಓಲೈಕೆಯಲ್ಲ ಎಂದು ಟೀಕಿಸಿದ್ದಾರೆ.












