ಉಡುಪಿ: ಜುವೆಲ್ಲರಿ ವರ್ಕ್‌ಶಾಪ್‌ ಗೆ ನುಗ್ಗಿ ಅಪಾರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ; ಸಿಸಿಟಿವಿಯಲ್ಲಿ ಬಯಲಾಯಿತು ಕಳ್ಳರ ಕೃತ್ಯ

ಉಡುಪಿ: ಉಡುಪಿ ನಗರದ ಚಿತ್ತರಂಜನ್ ಸರ್ಕಲ್‌ನ ಮಾರುತಿ ವೀಥಿಕಾ ಬಳಿ ಜುವ್ಯೆಲ್ಲರಿ ವರ್ಕ್‌ಶಾಪ್‌ಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳ್ಳತನಗೈದು ಪರಾರಿಯಾಗಿದ್ದಾರೆ.

ಕಳ್ಳತನ‌ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವರ್ಕ್‌ಶಾಪ್‌ನ ಒಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ಕೃತ್ಯದಲ್ಲಿ ಇಬ್ಬರು ಮುಸುಕುಧಾರಿಗಳು ಇರುವುದು ಕಂಡುಬಂದಿದೆ. ಅದರಲ್ಲಿ ಒಬ್ಬಾತ ಮೊದಲಿಗೆ ಒಳಗೆ ಬಂದು ಒಳಗಿನ ಎರಡು ಸಿಸಿಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹಾಕಿ ದೃಶ್ಯ ಕಾಣದಂತೆ ಮಾಡಿರುವುದು ಸೆರೆಯಾಗಿದೆ. ಕಳ್ಳರು ಕಾರು ಮತ್ತು ಬೈಕಿನಲ್ಲಿ ಬಂದು ಈ ಕೃತ್ಯ ಎಸಗಿರುವ ಮಾಹಿತಿ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಕೆಲಸಕ್ಕಿದ್ದವನಿಂದಲೇ ಕೃತ್ಯದ ಶಂಕೆ:

ಈ ವರ್ಕ್‌ಶಾಪ್‌ನಲ್ಲಿ ಸಾಂಗ್ಲಿಯ ವ್ಯಕ್ತಿಯೊಬ್ಬ ಕೆಲಸಕ್ಕೆ ಇದ್ದನು. ಆತ ಸುಮಾರು ಎರಡು ತಿಂಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದನು. ಅವನ ಕೈಯಲ್ಲಿ ವರ್ಕ್‌ಶಾಪ್ ಕೀ ಇತ್ತು ಎನ್ನಲಾಗಿದೆ. ಇದನ್ನೇ ನಕಲಿ ಮಾಡಿ ಇಟ್ಟುಕೊಂಡು ಆತ ಬೇರೆಯವರಿಂದ ಈ ಕೃತ್ಯ ಮಾಡಿಸಿರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ.

95.71ಲಕ್ಷ ರೂ. ಮೌಲ್ಯದ ಸೊತ್ತು ಕಳವು:

ವರ್ಕ್‌ಶಾಪ್‌ನ ಒಳಗೆ ನುಗ್ಗಿದ ಕಳ್ಳರು ರಿಫೈನರಿ ಮೆಷಿನ್‌ನಲ್ಲಿ ಇರಿಸಿದ್ದ 65.96ಲಕ್ಷ ರೂ. ಮೌಲ್ಯದ ಸುಮಾರು 680 ಗ್ರಾಂ ಚಿನ್ನ ಹಾಗೂ ಅಂಗಡಿಯ ಚಿನ್ನ ಇಡುವ ಡ್ರಾವರ್ ಬೀಗವನ್ನು ನಕಲಿ ಕೀಯಿಂದ ತೆಗೆದು ಅದರೊಳಗಿದ್ದ ರಿಫೈನ್ ಮಾಡಿದ್ದ 22ಲಕ್ಷ ರೂ. ಮೌಲ್ಯದ ಸುಮಾರು 200 ಗ್ರಾಂ ಚಿನ್ನ ಮತ್ತು ರಿಫೈನ್ ಮಾಡಿದ್ದ ಸುಮಾರು 6.25ಲಕ್ಷ ರೂ. ಮೌಲ್ಯದ 5 ಕೆಜಿ ತೂಕದ ಬೆಳ್ಳಿಯ ಸಣ್ಣ ಸಣ್ಣ ಗಟ್ಟಿಗಳು, 1,50,000ರೂ. ನಗದನ್ನು ಕಳವು ಮಾಡಿಕೊಂಡಿ ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯದ 95.71ಲಕ್ಷ ರೂ. ಎಂದು ಅಂದಾಜಿಸಲಾಗಿದೆ.