ಉಡುಪಿ: ಉದ್ಯಾವರದಲ್ಲಿ ಬೈಕ್-ಟ್ಯಾಂಕರ್ ನಡುವೆ ಅಪಘಾತ; ಸವಾರ ಮೃತ್ಯು

ಉಡುಪಿ: ರಾಷ್ಟ್ರೀಯ ಹೆದ್ದಾರಿ ಉದ್ಯಾವರ ಸಮೀಪದ ಬಲೈಪಾದೆ ಜಂಕ್ಷನ್‌ನಲ್ಲಿ ಟ್ಯಾಂಕರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ನಿವಾಸಿ ಸುರೇಶ್ (43) ಎಂದು ಗುರುತಿಸಲಾಗಿದೆ.

ಸುರೇಶ್ ಅವರು ಬ್ರಹ್ಮಾವರದಲ್ಲಿ ಬ್ರಹ್ಮಾವರ ವರ್ಕ್ ಶಾಪ್‌ ಅಂಗಡಿಯನ್ನು ನಡೆಸುತ್ತಿದ್ದರು. ಇವರು ಕೆಲಸ ಮುಗಿಸಿ ಉದ್ಯಾವರದಿಂದ ಹಿಂತಿರುಗುತ್ತಿದ್ದಾಗ, ಕಟಪಾಡಿಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಅವರ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ, ಅವರು ತಮ್ಮ ಬೈಕ್‌ನೊಂದಿಗೆ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.