ಉಡುಪಿ: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2024-25ನೇ ಸಾಲಿನಲ್ಲಿ 15.47 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ.
ಉಡುಪಿ ಅಮ್ಮಣ್ಣಿರಾಮಣ್ಣ ಸಭಾಭವನದಲ್ಲಿ ಭಾನುವಾರ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.

ಸಂಘದ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 21,519 ಸದಸ್ಯರಿಂದ 4.83ಕೋಟಿ ರೂ. ಪಾಲು ಬಂಡವಾಳ ಹಾಗೂ 573.19 ಕೋಟಿ ರೂ. ಠೇವಣಿ ಹೊಂದಿದ್ದು, 476.99ಕೋಟಿ ರೂ. ಹೊರ ಬಾಕಿ ಸಾಲ ಹೊಂದಿದೆ. ಈ ಮೂಲಕ ಸಂಘವು 2024-25ನೇ ಸಾಲಿನಲ್ಲಿ ಸುಮಾರು 2,956 ಕೋಟಿ ರೂ.ಗೂ ಮೇಲ್ಪಟ್ಟು ವಾರ್ಷಿಕ ವಹಿವಾಟು ನಡೆಸಿದೆ ಎಂದು ತಿಳಿಸಿದರು.
ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಪ್ರಸಕ್ತ ವರದಿ ಸಾಲಿನಲ್ಲಿ ಸೊಸೈಟಿ 15.47 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ ಎಂದರು.
ಸತತವಾಗಿ 2 ಬಾರಿ ರಾಷ್ಟ್ರ ಪ್ರಶಸ್ತಿ, 9 ಬಾರಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಸಂಸ್ಥೆಗೆ ಇತ್ತೀಚೆಗೆ ಮಂಗಳೂರಿನಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ “ಸಾಧನಾ ಪ್ರಶಸ್ತಿ” ಲಭಿಸಿದೆ. ಸತತವಾಗಿ 19ನೇ ಬಾರಿಗೆ ಒಲಿದ ಜಿಲ್ಲಾ ಪ್ರಶಸ್ತಿ ಇದಾಗಿದೆ ಎಂದು ತಿಳಿಸಿದರು.
ಡಿಜಿಟಲೀಕರಣದ ಹೆಜ್ಜೆಯಾಗಿ ಅಭಿವೃದ್ಧಿಪಡಿಸಿದ “ಚೇತನಾ ಮೊಬೈಲ್ ಆ್ಯಪ್” ಕುರಿತು ಮಾಹಿತಿ ನೀಡಿ, ಸುರಕ್ಷಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಭದ್ರತಾಕ್ರಮ ಅನುಸರಿಸಿಕೊಂಡು ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿಪಡಿಸಿದ್ದು ಸದಸ್ಯರು ಈ ಸೌಲಭ್ಯದ ಪ್ರಯೋಜನ ಪಡೆಯುವಂತೆ ತಿಳಿಸಿದರು. ಆಧುನಿಕತೆಗೆ ಸಾಕ್ಷಿಯಾಗಿ ದೈನಿಕ ಠೇವಣಿ ಸಂಗ್ರಹಣೆಯನ್ನು ಮೊಬೈಲ್ ಆ್ಯಪ್ (ಪಿಗ್ಗಿ ಮೊಬೈಲ್ ಆ್ಯಪ್) ಮೂಲಕ ನಡೆಸಲಾಗುತ್ತಿದೆ ಎಂದರು.

ಕೇವಲ ಬ್ಯಾಂಕಿಂಗ್ ವ್ಯವಹಾರವನ್ನು ಮಾತ್ರ ನೆಚ್ಚಿಕೊಳ್ಳದೇ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು ವಾರ್ಷಿಕ ಸುಮಾರು ರೂ. 25 ಲಕ್ಷದಷ್ಟು ಶಿಕ್ಷಣ. ಆರೋಗ್ಯ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ತೊಡಗಿಸುತ್ತಿದೆ ಎಂದು ತಿಳಿಸಿದರು.
ಬ್ಯಾಂಕಿಂಗೇತರ ವ್ಯವಹಾರಗಳಾದ ಸೇಫ್ ಲಾಕರ್, ಇ-ಸ್ಟ್ಯಾಂಪಿಂಗ್, ಪಾನ್ ಕಾರ್ಡ್, NEFT/RTGS, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್, ಲಂಬಾರ್ಡ್ ಆರೋಗ್ಯ ಕಾರ್ಡ್. ಮಣಿಪಾಲ ಆರೋಗ್ಯ ಕಾರ್ಡ್, ಎಲ್ಲಾ ರೀತಿಯ ವಿಮಾ ಸೌಲಭ್ಯ, ಮಿಸ್ಟ್‌ಕಾಲ್ ಸರ್ವಿಸ್, ಮೊಬೈಲ್ ಆ್ಯಪ್ ಮೂಲಕ ಪಿಗ್ಗಿ ಸಂಗ್ರಹಣೆ, ಉಚಿತ ಎಸ್.ಎಂ.ಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಆಯ್ದ 13 ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಬ್ರಹ್ಮಾವರದ ಆರೂರಿನ ವಿದುಷಿ ದೀಕ್ಷಾ ವಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಜಾರ್ಜ್ ಸ್ಯಾಮುವೆಲ್, ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್, ಎಲ್.ಉಮಾನಾಥ, ಪುರುಷೋತ್ತಮ ಪಿ. ಶೆಟ್ಟಿ, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ., ಪದ್ಮನಾಭ ಕೆ.ನಾಯಕ್, ಸದಾಶಿವ ನಾಯ್ಕ್, ಸಾಧು ಸಾಲ್ಯಾನ್, ಜಯಾ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.












