ಉಡುಪಿ: ಸ್ಥಳೀಯ ವಾಹನಗಳಿಗೆ ವಿನಾಯಿತಿ ಇದ್ದರೂ, ಖಾತೆಯಿಂದ ಹಣ ಕಡಿತಗೊಳ್ಳುವ ಬಗ್ಗೆ ಆಕ್ರೋಶಗೊಂಡ ಹೆಜಮಾಡಿ ನಾಗರಿಕರು ಹೆಜಮಾಡಿ ಕಿರು ಟೋಲ್ ಬಳಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಹೆಜಮಾಡಿಯಲ್ಲಿ ಸ್ಥಳೀಯ ವ್ಯಕ್ತಿಯ ವಾಹನವೊಂದು ಟೋಲ್ ವಿನಾಯಿತಿ ಪಡೆದು ಮುಂದೆ ತೆರಳಿದ ಕೆಲವೇ ಸಮಯದ ಬಳಿಕ ಖಾತೆಯಿಂದ ಟೋಲ್ ಹಣ ಕಡಿತಗೊಂಡಿದೆ. ಕೂಡಲೇ ಅವರು ಸ್ಥಳೀಯರಿಗೆ ತಿಳಿಸಿದಾಗ ಇಂತಹ ಸ್ಥಿತಿ ಹಲವರಿಗಾಗಿದೆ ಎಂದು ತಿಳಿದು ಬಂದಿದೆ. ಕಿರು ಟೋಲ್ ನಲ್ಲಿ ಕೂಡಲೇ ಸ್ಥಳೀಯರು ವಾಹನ ತಡೆದು ಪ್ರತಿಭಟಿಸಿದಾಗ ತಕ್ಷಣ ಟೋಲ್ ಪ್ರಬಂಧಕ ಸ್ಥಳಕ್ಕಾಗಮಿಸಿ ಸಬೂಬು ನೀಡಲು ಯತ್ನಿಸಿದರು. ಈ ಬಗ್ಗೆ ಕೆಲಕಾಲ ಸ್ಥಳೀಯರು ಮತ್ತು ಟೋಲ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೋಲಿಸ್ ಇಲಾಖೆ ಹಾಗೂ ಟೋಲ್ ಪ್ರಮುಖರ ಸಭೆ ಸೋಮವಾರ ಕರೆಯಲಾಗುವುದು ಎಂಬ ನಿರ್ಣಯಕ್ಕೆ ಬರಲಾಯಿತು.
ಸ್ಥಳೀಯರಾದ ಸಚಿನ್ ಮಾತನಾಡಿ, ಟೋಲ್ ವಿನಾಯಿತಿ ಇದ್ದರೂ ವಾರದಲ್ಲಿ 5-6 ಬಾರಿ ಹಣ ಕಡಿತಗೊಂಡಿದೆ. ಇದನ್ನು ಪ್ರಶ್ನಿಸಿದಾಗ ಮರು ಪಾವತಿಸಲಾಗುವುದು ಎಂದು ಹೇಳುತ್ತಿದ್ದಾರೆ. ಅಲ್ಲದೆ, ಆ ಹಣವನ್ನು ಟೋಲ್ ಸಿಬ್ಬಂದಿಗಳ ಸಂಬಳದಿಂದ ಕಡಿತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿಯವರು ಕರೆದ ಸಭೆಯಲ್ಲಿ ಸ್ಥಳೀಯರಿಗೆ ಹೆಜಮಾಡಿ ಟೋಲ್ ನಲ್ಲಿ ವಿನಾಯಿತಿ ನೀಡಲಾಗಿದೆ. ಸೂಕ್ತ ದಾಖಲೆಗಳನ್ನು ಪಂಚಾಯತ್ ಮೂಲಕ ಸಲ್ಲಿಸಲಾಗಿದ್ದರೂ ಸ್ಥಳೀಯರಿಗೆ ಅನ್ಯಾಯ ಮಾಡಲಾಗತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪಾಂಡುರಂಗ, ಪ್ರಾಣೇಶ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು.












