ಉಡುಪಿ: ಅಕ್ರಮ ಗೋ ಸಾಗಾಟದ ವೇಳೆ ಪೊಲೀಸರ ಹತ್ಯೆಗೆ ಯತ್ನ; ಇಬ್ಬರು ಆರೋಪಿಗಳ ಬಂಧನ


ಉಡುಪಿ: ಅಕ್ರಮ ಗೋ ಸಾಗಾಟದ ವೇಳೆ ಪೊಲೀಸರ ಮೇಲೆ ಕಾರು ಹತ್ತಿಸಿ ಹತ್ಯೆಗೆ ಯತ್ನಿಸಿದ ಇಬ್ಬರು ಖತಾರ್ನಕ್ ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಬಂಧಿತ ಆರೋಪಿಗಳು. ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್‌ಐ ಹಾಗೂ ಸಿಬ್ಬಂದಿ ಅಲ್ಲಿನ ದನ ಕಳವು ಪ್ರಕರಣ ಒಂದರಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಟೋಲ್ ಗೇಟ್ ಬಳಿ ಕಾಯುತ್ತಿದ್ದರು. ಈ ವೇಳೆ ಫಾರ್ಚುನರ್ ಕಾರು ಬಂದಿದ್ದು, ಅದರಲ್ಲಿ ಐದಾರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಲಾಗಿತ್ತು. ಕಾರಿನ ಚಾಲಕನ ಬಳಿ ಪೊಲೀಸರು ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ನಮ್ಮನ್ನು ಹುಡುಕಿಕೊಂಡು ಇಲ್ಲಿಯವರೆಗೆ ಬರುತ್ತೀರಾ? ಎಂದು ಕೇಳಿ ಪೊಲೀಸರ ಮೇಲೆ ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರು ಕಾರಿನಲ್ಲಿದ್ದ ಶಾರೋಜ್ ಸುರತ್ಕಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ಕಾರನ್ನು ಚಲಾಯಿಸಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.

ಆರೋಪಿಗಳಾದ ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್‌ ರಾಜಿಕ್ ಬಜಪೆ ಎಂಬವರನ್ನು ಇಂದು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.