ಮೂಡುಬಿದಿರೆ:ತಂದೆ-ತಾಯಿಯ ಕಣ್ಣುಗಳಲ್ಲಿ ಹೆಮ್ಮೆ ಮೂಡಿಸುವ ಕ್ಷಣ, ಪ್ರತಿಯೊಬ್ಬರ ಜೀವನದ ಶ್ರೇಷ್ಠ ಕ್ಷಣ: ಸಿಎ ತಬಿಶ್ ಹಸನ್

ಮೂಡುಬಿದಿರೆ: ಜೀವನದಲ್ಲಿ ಯಶಸ್ಸು ಕೇವಲ ಪ್ರತಿಭೆಯಿಂದ ನಿರ್ಧಾರವಾಗುವುದಿಲ್ಲ. ಶ್ರೇಷ್ಠ ಸಾಧನೆಯೆಡೆಗಿನ ತುಡಿತ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಹಾಗೂ ಗುರಿಯತ್ತ ಸರಿಯಾದ ಮಾರ್ಗದಲ್ಲಿ ಸಾಗುವ ಪ್ರಾಮಾಣಿಕ ಪ್ರಯತ್ನ ಸಾಧನೆಯನ್ನು ಸಹಕಾರಗೊಳಿಸುತ್ತದೆ ಎಂದು 2021ರ ಅಖಿಲ ಭಾರತ ಸಿಎ ಅಂತಿಮ ಪರೀಕ್ಷೆಯಲ್ಲಿ 10ನೇ ರ‍್ಯಾಂಕ್ ಪಡೆದ ಆಳ್ವಾಸ್‌ನ ಹಿರಿಯ ವಿದ್ಯಾರ್ಥಿ ಸಿಎ ತಬಿಶ್ ಹಸನ್ ಅಭಿಪ್ರಾಯಪಟ್ಟರು.

ಶನಿವಾರ ಆಳ್ವಾಸ್ ಪಿಯು ಕಾಲೇಜಿನ ವಾಣಿಜ್ಯ ಸಂಘದ ಆಶ್ರಯದಲ್ಲಿ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿಯಲ್ಲಿ ಟಾಪ್ 10ರ ಒಳಗೆ ರ‍್ಯಾಂಕ್ ಪಡೆದ ಹಾಗೂ ಸಿಎ ಫೈನಲ್ ಪರೀಕ್ಷೆಯನ್ನು 2025 ರಲ್ಲಿ ಉತ್ತೀರ್ಣರಾದ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೇರಣಾದಾಯಕ ಸಂದೇಶ ನೀಡಿದರು.

ಗುರಿಯನ್ನು ಕೇಂದ್ರೀಕರಿಸಿ, ಅದನ್ನು ಸಾಧಿಸಲು ಶ್ರಮಿಸುವುದು ಅತಿ ದೊಡ್ಡ ಸಾಧನೆ ಏನಿಸಿಕೊಳ್ಳುತ್ತದೆ. ಸುಲಭವಾಗಿ ಸಿಗುವ ತಕ್ಷಣದ ಯಶಸ್ಸು ಭ್ರಮೆಯೆ ಸರಿ. ಶ್ರೇಷ್ಠ ಸಾಧನೆಗೆ ತಾಳ್ಮೆ ಮತ್ತು ಪರಿಶ್ರಮ ಬೇಕು. ಕನಸನ್ನು ನನಸಾಗಿಸಲು ತ್ಯಾಗ ಅಗತ್ಯ, ಆದರೆ ಯಾವತ್ತೂ ಕನಸುಗಳನ್ನು ತ್ಯಜಿಸಬೇಡಿ. ತಂದೆ- ತಾಯಿಯ ಕಣ್ಣುಗಳಲ್ಲಿ ಹೆಮ್ಮೆ ಮೂಡಿಸುವ ಕ್ಷಣ, ಪ್ರತಿಯೊಬ್ಬರ ಜೀವನದ ಶ್ರೇಷ್ಠ ಕ್ಷಣ. ಆ ಕ್ಷಣ ನನಗೆ ಲಭಿಸಿದೆ. ಸಾಧನೆಯ ಹಾದಿಯಲ್ಲಿ ತಪ್ಪುಗಳು ಸಹಜ. ಆದರೆ ಅವನ್ನು ತಕ್ಷಣ ಸರಿಪಡಿಸಿಕೊಳ್ಳುವ ಮನೋಧರ್ಮ ಅಗತ್ಯ. ದೇವರ ಮೇಲಿನ ನಂಬಿಕೆ ಮತ್ತು ಆತ್ಮವಿಶ್ವಾಸದ ನಡೆ ಸಫಲತೆಯೆಡೆಗೆ ಒಯ್ಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಯಶಸ್ಸಿಗೆ ನಿರಂತರತೆಯೇ ಮೂಲಮಂತ್ರ. ನಿಮ್ಮ ಬೆಳವಣಿಗೆಯ ಹಿಂದೆ ಪೋಷಕರು ಮಾಡಿದ ತ್ಯಾಗವನ್ನು ಸದಾ ನೆನಪಿನಲ್ಲಿಡಿ. ಯಶಸ್ಸು ಕ್ಷಣಿಕ ಸಾಧನೆಯಲ್ಲ ಅದು ನಿರಂತರತೆಯ ಫಲಶ್ರುತಿ. ಸಾಧನೆ ಮೆರೆದ ವಿದ್ಯಾರ್ಥಿಗಳೇ ಆಳ್ವಾಸ್‌ನ ಬ್ರಾಂಡ್. ಸಂಸ್ಥೆಯ ಅಧ್ಯಕ್ಷರ ಅಂದಿನ ಕಾಳಜಿಯ ಫಲವಾಗಿ ಇಂದು ವಿದ್ಯಾರ್ಥಿಗಳು ಸಾಧನೆ ಮಾಡುವಂತಾಯಿತು ಎಂದರು.

ಪ್ರಸಕ್ತ ವರ್ಷದಲ್ಲಿ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ 26 ವಿದ್ಯಾರ್ಥಿಗಳು ಹಾಗೂ 2025ನೇ ಸಾಲಿನಲ್ಲಿ ವಾಣಿಜ್ಯ ಮತ್ತು ಕಲಾ 20 ವಿಭಾಗದಲ್ಲಿ ಟಾಪ್ 10ರ ಒಳಗೆ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು.
ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಚರ‍್ಯ ಪ್ರೋ ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್, ಕಲಾ ನಿಖಾಯದ ಡೀನ್ ವೇಣುಗೋಪಾಲ ಶೆಟ್ಟಿ, ವಾಣಿಜ್ಯ ನಿಖಾಯದ ಡೀನ್ ಪ್ರಶಾಂತ ಎಂ.ಡಿ ಇದ್ದರು. ಉಪನ್ಯಾಸಕ ರಾಜೇಶ್ ಡಿಸೋಜಾ ಕರ‍್ಯಕ್ರಮ ನಿರ್ವಹಿಸಿ, ಉಪನ್ಯಾಸಕಿ ಶಾಲೆಟ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು.