ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಡ್ರೋನ್ ಉಪಕರಣವನ್ನು ಉಪಯೋಗಿಸುವ ಸಂಬಂಧ 15 ದಿನಗಳ ವಸತಿಯುತ ತರಬೇತಿ ನೀಡಲಿದೆ.
ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ 2025-26ನೇ ಸಾಲಿನ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಡೋನ್ ಉಪಕರಣವನ್ನು ಲಾಜಿಸ್ಟಿಕ್ ಸರ್ವೇಲೆನ್ಸ್ (Logistics Surveillance), ಕೃಷಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉಪಯೋಗಿಸುವ ಸಂಬಂಧ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳು, ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗಗಳಿಗೆ ಪ್ರತ್ಯೇಕವಾಗಿ 15 ದಿನಗಳ ವಸತಿಯುತ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ತರಬೇತಿ ಅವಧಿ, ತರಬೇತಿ ವಿವರ, ಅರ್ಜಿ ಸಲ್ಲಿಸಬೇಕಾದ ವೆಬ್ ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯಲ್ಲಿನ ದಿನಾಂಕದ ವಿವರಗಳನ್ನು ನೀಡಿದ್ದಾರೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಉತ್ತರ ಎಂದು ಕರೆಯಲ್ಪಡುವ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳು ಹಾಗೂ ದಕ್ಷಿಣ ವಿಭಾಗ ಎಂದು ಕರೆಯಲ್ಪಡುವ ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗಗಳ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಡ್ರೋನ್ ಉಪಕರಣವನ್ನು ಉಪಯೋಗಿಸುವ ಸಂಬಂಧ 15 ದಿನಗಳ ವಸತಿಯುತ ತರಬೇತಿ ಸಿಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅರ್ಜಿ ಸಲ್ಲಿಸುವ ವಿವರಗಳು:
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
- ಈ ತರಬೇತಿ ಪಡೆಯುವವರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ.
- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
- ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 5 ಲಕ್ಷ ರೂ. ಮೀರಿರಬಾರದು.
ಅರ್ಜಿಯನ್ನು ಮೊದಲು ಸಲ್ಲಿಸದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆಸಕ್ತರು https://igccd.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-09-2025 ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯು ಆಯ್ಕೆ ಮಾಡಿದ ವಿಭಾಗದ ಪ್ರಕಾರ ತರಬೇತಿ ವಿಭಾಗವನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಯ ತರಬೇತಿ ವಿಭಾಗವನ್ನು ಬದಲಾಯಿಸುವ ಅಧಿಕಾರವನ್ನು ಇಲಾಖೆ ಹೊಂದಿರುತ್ತದೆ. ಅಭ್ಯರ್ಥಿಯು ತರಬೇತಿಯ ಎಲ್ಲ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಬೇಕು. ತರಬೇತಿಯ ವೇಳಾಪಟ್ಟಿಯನ್ನು ನಿರ್ವಹಿಸಬೇಕು. ತರಬೇತಿಯ ನಿಯಮಗಳನ್ನು ಪಾಲಿಸದಿದ್ದರೇ, ಅಂತಹ ಅಭ್ಯರ್ಥಿಯನ್ನು ಅನರ್ಹಗೊಳಿಸುವ ಅಧಿಕಾರವನ್ನು ಇಲಾಖೆ ಹೊಂದಿರುತ್ತದೆ.
ಅಭ್ಯರ್ಥಿಯು 15 ದಿನಗಳ ತರಬೇತಿಯನ್ನು ಪೂರ್ಣಗೊಳಿಸಬೇಕು. ಈ ವೇಳೆ ತರಬೇತಿ ಸಂಸ್ಥೆ, ಅಧ್ಯಾಪಕ ಸದಸ್ಯರು ಅಥವಾ ಬೋಧಕರ ಕಡೆಗೆ ಅವಿಧೇಯತೆ ಅಥವಾ ದುರ್ನಡತೆ ಪ್ರದರ್ಶಿಸುವ ಯಾವುದೇ ಅಭ್ಯರ್ಥಿಯನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ. ತುರ್ತು ಸಂದರ್ಭದಲ್ಲಿ ಮಾತ್ರವೇ ಅಭ್ಯರ್ಥಿಯು ತರಬೇತಿ ಸಂಸ್ಥೆ ಮತ್ತು ಇಲಾಖೆಯ ಅನುಮತಿಯೊಂದಿಗೆ ತರಬೇತಿ ಆವರಣದಿಂದ ಹೊರಗೆ ಹೋಗಬಹುದು. ಪರೀಕ್ಷೆಯನ್ನು ನಡೆಸಿ, ಅದರ ಫಲಿತಾಂಶದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಇಲಾಖೆಯು ಹೊಂದಿದೆ ಎಂದು ಸ್ಪಷ್ಟಪಡಿಸಿದೆ.












