ಅಪ್ರಾಪ್ತ ಬಾಲಕಿ ಜೊತೆಗೆ ಮದುವೆ: ಗ್ರಾ.ಪಂ ಅಧ್ಯಕ್ಷನ ವಿರುದ್ಧ POCSO ಪ್ರಕರಣ ದಾಖಲು!

ಬೆಳಗಾವಿ: ಅಪ್ರಾಪ್ತ 15 ವರ್ಷದ ಬಾಲಕಿ ಜೊತೆ ಮದುವೆಯಾದ ಆರೋಪದ ಮೇರೆಗೆ ಬೆಳಗಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ POCSO ಪ್ರಕರಣ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬಸ್ಸಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಭೀಮಶಿ ಕಾಳಿಮನಿ ಎಂಬಾತನ ವಿರುದ್ಧ 15 ವರ್ಷದ ಬಾಲಕಿಯನ್ನು ವಿವಾಹವಾದ ಆರೋಪ ಹೊರಿಸಲಾಗಿದೆ. ನವೆಂಬರ್ 2023 ರಲ್ಲಿ ನಡೆದ ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ಕಾಳಿಮಣಿ ನವೆಂಬರ್ 5, 2023 ರಂದು ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದ. ಈ ಹುಡುಗಿ ಐದು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ವರದಿಯಾಗಿದೆ. ಆರೋಪಗಳು ದೃಢಪಟ್ಟ ನಂತರ, ಪೊಲೀಸರು ಕಾಳಿಮಣಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮಕ್ಕಳ ಹಕ್ಕುಗಳ ಆಯೋಗವು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗೆ ಎಫ್‌ಐಆರ್ ದಾಖಲಿಸಿ ಹುಡುಗಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿತ್ತು. ಜಿಲ್ಲಾಧಿಕಾರಿ, ಮಕ್ಕಳ ರಕ್ಷಣಾ ಅಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ಸೂಚನೆಗಳನ್ನು ನೀಡಲಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಮಹತ್ವದ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಇದೇ ವೇಳೆ ಆರೋಪಿ ಕಾಳಿಮಣಿ ಬಂಧನದಿಂದ ತಪ್ಪಿಸಿಕೊಳ್ಳಲು ಇಬ್ಬರು ಕ್ಯಾಬಿನೆಟ್ ಸಚಿವರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಪೊಲೀಸ್ ಕ್ರಮಕ್ಕೆ ಹೆದರಿ ಆತ ತಲೆಮರೆಸಿಕೊಂಡಿದ್ದ. ದೂರಿನ ನಂತರ ಮಕ್ಕಳ ರಕ್ಷಣಾ ತಂಡಗಳು ಬಸ್ಸಾಪುರ ಗ್ರಾಮಕ್ಕೆ ನಾಲ್ಕು ಬಾರಿ ಭೇಟಿ ನೀಡಿದರೂ ಆತನನ್ನು ಬಂಧಿಸುವಲ್ಲಿ ವಿಫಲವಾಗಿವೆ ಎಂದು ಮೂಲಗಳು ತಿಳಿಸಿವೆ.