ಉಡುಪಿ : ನಮ್ಮ ಹಿಂದಿನ ತಲೆಮಾರಿನವರು ಅರಣ್ಯವನ್ನು ಉಳಿಸಿ, ಬೆಳೆಸಿದ ಕಾರಣ ಅದರ ಪ್ರಯೋಜನವನ್ನು ನಾವು ಪಡೆಯುತ್ತಿದ್ದೇವೆ, ನಾವೂ ಸಹ ನಮ್ಮ ಮುಂದಿನ ತಲೆಮಾರಿನ ಪ್ರಯೋಜನಕ್ಕೆ ಅರಣ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಅವರು ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ ಪ್ರೆಸ್ಕ್ಲಬ್ ಉಡುಪಿ ಸಹಯೋಗದೊಂದಿಗೆ, ಬಡಗಬೆಟ್ಟುವಿನ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ನಡೆದ ವೃಕ್ಷೋತ್ಸವ 2019 ಅರಣ್ಯ, ವನ್ಯಜೀವಿ ಹಾಗೂ ಪರಿಸರದ ಆಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅರಣ್ಯ ಸಂಪತ್ತು ನಶಿಸುತ್ತಿದ್ದು, ಇದನ್ನು ಸುಧಾರಿಸಲು ಅರಣ್ಯ ರಕ್ಷಣೆ ಎಲ್ಲರ ಜವಬ್ದಾರಿಯಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟು ಬೆಳೆಸಿ ಮುಂದಿನ ತಲೆಮಾರಿಗೆ ಗಿಡ, ಪ್ರಾಣಿ, ಪಕ್ಷಿ ಅರಣ್ಯ ಸಂಪತ್ತು ಉಳಿಸಿ ತೋರಿಸುವಂತಾಗಬೇಕು. ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ಮಾಡಲಾಗಿರುವಂತಹ ವನ್ಯಜೀವಿಗಳ ಪ್ರತಿಮೆಯನ್ನು ಮುಂದಿನ ಜನಾಂಗ ಜೀವಂತವಾಗಿ ನೋಡುವಂತಾಗಬೇಕು. ಇದಕ್ಕಾಗಿ ಅರಣ್ಯ ಸಂರಕ್ಷಿಸಿದರೇ ಮಾತ್ರ ಸಾಧ್ಯ. ಉಡುಪಿಯ ಈ ಟ್ರೀ ಪಾರ್ಕ್ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿರು ವೀಕ್ಷಿಸಲೇಬೇಕಾದ ಪ್ರವಾಸ ತಾಣಗಳಲ್ಲಿ ಒಂದಾಗಬೇಕು. ಅರಣ್ಯ ಹಾಗೂ ವನ್ಯ ಜೀವಿಗಳ ಬಗ್ಗೆ ಎಲ್ಲರಿಗೂ ತಿಳಿಯುವಂತಾಗಲು ಮಾಹಿತಿ ಕೇಂದ್ರವನ್ನು ಇಲ್ಲಿ ನಿರ್ಮಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಮಲ ಕೆ.ಮಾತನಾಡಿ, ಅರಣ್ಯ ಜೀವನದ ಮೂಲ, ಅರಣ್ಯ ಇದ್ದರೆ ಮಾತ್ರ ಜೀವನ ಸಾಧ್ಯ. ವನಮಹೋತ್ಸವಗಳಂತಹ ಸಸ್ಯ ಸಂಪತ್ತನ್ನು ವೃದ್ಧಿಸುವ ಹಾಗೂ ಕಾಪಾಡುವ ಕಾರ್ಯವು ಒಂದೇ ದಿನಕ್ಕೆ ಸೀಮಿತವಾಗಿರದೇ ಪ್ರತಿನಿತ್ಯದ ಕಾಯಕವಾಗಬೇಕು. ಪೂರ್ವಜರು ನೀಡಿರುವ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಸ್ವಇಚ್ಚೆಯಿಂದ ಮಾಡಿ, ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ನೀಡಬೇಕು ಎಂದು ಹೇಳಿದರು.
ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನೀತ್ ಪಾಠಕ್ ಮಾತನಾಡಿದರು.
ಉಡುಪಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು ಮಾತನಾಡಿ, ವನ್ಯ ಸಂಪತ್ತು ರಕ್ಷಣೆಯಲ್ಲಿ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದು, ವಿದ್ಯಾರ್ಥಿಗಳು ಗಿಡ ನೆಡುವುದರ ಜೊತೆ ನೆಟ್ಟ ಗಿಡಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೃತ್ತಿಪರ ಕಲಾವಿದ ಪುರುಶೋತ್ತಮ ಅಡ್ವೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಕಿರು ನಾಟಕ ಪದರ್ಶನ, ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳ ಮನೆ ನೇತೃತ್ವ ವಹಿಸಿದ ಗಣೇಶ್ ಕುಂದಾಪುರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಾಗೂ ಮಕ್ಕಳ ಮನೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಂದ ತಯಾರಿಸಲಾದ ಬುಟ್ಟಿ ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೋಟ್, ಕುಂದಾಪುರ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಉಡುಪಿ ವಲಯ ಅರಣ್ಯಾಧಿಕರಿ ಕ್ಲಿಪರ್ಡ್ ಲೋಬೋ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ನಾಗರಾಜ್ ವಂದಿಸಿದರು.