ಮಲ್ಪೆ: ಭಾರತೀಯ ಸ್ಟೇಟ್ ಬ್ಯಾಂಕಿನ ಮಲ್ಪೆ ಶಾಖೆಯ ಮ್ಯಾನೇಜರ್ ಸೇರಿದಂತೆ ಇತರರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಬ್ಯಾಂಕಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ಹೌಸಿಂಗ್ ಫೈನಾನ್ಸ್ ಕಂಪೆನಿಯೊಂದರಿಂದ ಬಂದ ಇಮೇಲ್ ಸಂದೇಶದಂತೆ ಬ್ಯಾಂಕಿನ ಮಲ್ಪೆ ಶಾಖೆಯಿಂದ ಸಮುದ ಸುವರ್ಣ ನಂತೂರು , ಶರ್ಮಿಳಾ ಎಸ್. ಮುಳೂರು ಸುಶಾಂತ್ ತಿಂಗಳಾಯ, ಕೋಡಿ , ಎಂ.ರಮಾನಾಥ್ ಬೊಂದೆಲ್ ಮಂಗಳೂರು, ಸದಾನಂದ ಜಿ. ರಾವ್ ಕುಂಜಾಲು ಎಂಬ ಖಾತೆದಾರರಿಗೆ ಒಟ್ಟು 73,00,000 ರೂ. ಹಣ ವರ್ಗಾವಣೆ ಯಾಗಿರುವ ಬಗ್ಗೆ ಆ.25ರಂದು ಎಸ್ ಬಿ ಐ ಮುಂಬೈ ಶಾಖೆಯಿಂದ ವಿವರವನ್ನು ಮಲ್ಪೆ ಶಾಖೆಯ ಮ್ಯಾನೇಜರ್ ರಾಜೇಶ್ ಗಣಪತಿ ಅವರಲ್ಲಿ ಕೇಳಲಾಗಿತ್ತು. ಅದರಂತೆ ಮ್ಯಾನೇಜರ್ ಮಲ್ಪೆ ಶಾಖೆಯಿಂದ ಆಗಿರುವ ಹಣ ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಆ.26ರಂದು ಮುಂಬೈ ಶಾಖೆಗೆ ಸಲ್ಲಿಸಿದ್ದರು. ಬಳಿಕ ಫೈನಾನ್ಸ್ ಕಂಪೆನಿಯಿಂದ ಅದೇ ದಿನ ಬಂದ ಇಮೇಲ್ ನಲ್ಲಿ ಕಂಪೆನಿಯಿಂದ ಹಣ ವರ್ಗಾವಣೆಗೆ ಸಂಬಂಧಿಸಿ ಯಾವುದೇ ಮನವಿಯನ್ನು ಮಲ್ಪೆ ಶಾಖೆಗೆ ಕಳುಹಿಸಿರುವುದಿಲ್ಲ. ಎಂಬುದಾಗಿ ತಿಳಿಸಲಾಗಿತ್ತು.
ಈ ಬಗ್ಗೆ ಪರಿಶೀಲಿಸಿದಾಗ ಆಗ ಮಲ್ಪೆ ಶಾಖೆಯಲ್ಲಿ ಶಾಖಾ ಮ್ಯಾನೇಜರ್ ಆಗಿದ್ದ ಮೀರ ಪಲ್ಲವಿ ಟಿ.ಎಚ್., ಮೇಲಿನ ಖಾತೆದಾರರು ಮತ್ತು ಇತರರು ಸೇರಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಆ.11ರಿಂದ ಆ.22ರ ಮದ್ಯಾವಧಿಯಲ್ಲಿ ಒಟ್ಟು 73,00,000ರೂ. ಬ್ಯಾಂಕಿನ ಹಣವನ್ನು ದುರುಪಯೋಗಪಡಿಸಿ ಸ್ವಂತಕ್ಕೆ ಬಳಸಿ ಬ್ಯಾಂಕಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವುದಾಗಿ ದೂರಲಾಗಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












