ಉಡುಪಿ: ಧರ್ಮ, ಪೂಜೆ, ಭಕ್ತಿಗಳೆಲ್ಲವೂ ಪ್ರದರ್ಶನದ ವಸ್ತುಗಳಲ್ಲ. ಆಚಾರ-ವಿಚಾರಗಳನ್ನು ಎಲ್ಲರೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ನಾವು ಧರ್ಮವನ್ನು ಕಾಯಬೇಕು, ಧರ್ಮವನ್ನು ಉಳಿಸಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ಇಂದು ಸಂಜೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪರ್ಯಾಯ ಶ್ರೀಗಳಾದ ಶ್ರೀಸುಗುಣೇಂದ್ರತೀರ್ಥರ 64ನೇಯ ಜನ್ಮ ನಕ್ಷತ್ರೋತ್ಸವದ ಸಂಭ್ರಮ ಹಾಗೂ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಜಗದ್ಗುರು ಶ್ರೀಮಧ್ವಾಚಾರ್ಯರ ಸ್ಮರಣಾರ್ಥ ಅಂಚೆ ಇಲಾಖೆ ಹೊರತಂದ ಅಂಚೆ ಚೀಟಿಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ಬಂಡೆಯಿಂದ ಮೆಟ್ಟಿಲು, ಆಧಾರ ಸ್ತಂಭ, ಜಲ್ಲಿ, ವಿಗ್ರಹ ಮಾಡಬಹುದು. ಅದೇ ರೀತಿ ನೀವು ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂದು ಮಾರ್ಮಿಕವಾಗಿ ನುಡಿದರು.
ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವುದೇ ಹೆಚ್ಚಾಗಿದೆ. ಹೀಗಾಗಿ ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ. ಶ್ರೀಕೃಷ್ಣನ ದಿವ್ಯ ದರ್ಶನ ಮಾಡಿ ಶ್ರೀಗಳ ಜೊತೆಯಲ್ಲಿ ಮಧ್ವಾಚಾರ್ಯರ ಅಂಚೆಚೀಟಿ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ಎಂದು ತಿಳಿಸಿದರು.
ಧರ್ಮ, ಪೂಜೆ, ಭಕ್ತಿ ಪ್ರದರ್ಶನಕ್ಕಿರುವ ವಸ್ತುಗಳಲ್ಲ. ಎಲ್ಲರ ಆಚಾರ ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿರುವುದು ನಮ್ಮ ಕರ್ತವ್ಯ. ನಾನು ಅನೇಕ ಬಾರಿ ಕೃಷ್ಣ ಮಠಕ್ಕೆ ಹಾಗೂ ಕೃಷ್ಣನ ದಿವ್ಯ ಸಾನಿಧ್ಯಕ್ಕೆ ಬಂದಿದ್ದೇನೆ. ಶ್ರೀಗಳು ನನಗೆ ಕೃಷ್ಣನ ವಿಶ್ವರೂಪ ದರ್ಶನ ತೋರಿಸಿದರು. ನಾನು ಬಂಧಿಖಾನೆ ಸಚಿವನಾಗಿದ್ದಾಗಲೂ ನನಗೆ ಮಠದಿಂದ ಆಹ್ವಾನ ಬಂದಿತ್ತು. ಈ ವಿಶ್ವರೂಪ ದರ್ಶನವನ್ನು ನೋಡಿದಾಗ ನನಗೆ ನನ್ನ 50-60 ವರ್ಷಗಳ ಬದುಕಿನ ನೆನಪು ತಲೆಯಲ್ಲಿ ಸುಳಿದವು.
ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ , ಗುರುರ್ಗರೀಯಾನ್ ನ ತ್ವತ್ಸಮೋಸ್ತ್ಯಾಭ್ಯಧಿಕಃ ಕುತೋನ್ಯೋ ಲೋಕತ್ರಯೇಪ್ಯಪ್ರತಿಮಪ್ರಭಾವ” ಎಂದು ಭಗವದ್ಗೀತೆಯ ಶ್ಲೋಕ ಪಠಿಸಿದರು.
ಉಡುಪಿಗೆ ಬಂದು ಶ್ರೀಗಳ 64ನೇ ಜನ್ಮ ನಕ್ಷತ್ರೋತ್ಸವದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಂತೋಷವಾಗಿದೆ. ಶ್ರೀಗಳು ನನಗೆ ಬಹಳ ಅಕ್ಕರೆಯಿಂದ ಆಶೀರ್ವಾದ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಲಯ ಪ್ರಧಾನ ಪೋಸ್ಟ್ಮಾಸ್ಟರ್ ಜನರಲ್ ಕೆ.ಪ್ರಕಾಶ್ ಅವರು ಶ್ರೀಮಧ್ವಾಚಾರ್ಯರ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಪ್ರಾಸ್ತಾವಿಕವಾಗಿ ಮಾತನಾಡಿ ಅನುಗ್ರಹ ಸಂದೇಶ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ಆಶೀರ್ವಚನ ನೀಡಿದರು. ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಮಾಹೆಯ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಆಫ್ರಿಕನ್ ವಿವಿ ಉಪಕುಲಪತಿ ಡಾ.ಕೆ.ರವಿ ಆಚಾರ್ಯ, ಬೆಂಗಳೂರಿನ ಡಾ.ಮಹಾಂತೇಶ್ ಆರ್.ಚರಂತಿಮಠ, ಶತಾವಧಾನಿ ಡಾ.ಉಡುಪಿ ರಾಮನಾಥ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿಯ ವಿದ್ವಾನ್ ಗುರುರಾಜಾಚಾರ್ ಜೋಶಿ ಅವರನ್ನು ಪುತ್ತಿಗೆಶ್ರೀಗಳು ಸನ್ಮಾನಿಸಿದರು. ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಅಂಚೆ ಇಲಾಖೆಯ ಪೂರ್ಣಿಮಾ ಜನಾರ್ದನ್ ಹಾಗೂ ಡಾ.ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.












