ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿಯಲ್ಲಿ ಮಗನ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಕುಟುಂಬದಲ್ಲಿ ಉಡುಗೊರೆಗಳ ವಿಚಾರಕ್ಕೆ ಉಂಟಾದ ಜಗಳ, ಪತ್ನಿ ಮತ್ತು ಅತ್ತೆಯ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಆಗಸ್ಟ್ 30ರಂದು ನಡೆದಿದೆ.
ಹತ್ಯೆಯಾದವರನ್ನು ಕುಸುಮ್ ಸಿನ್ಹಾ (63) ಮತ್ತು ಆಕೆಯ ಮಗಳು ಪ್ರಿಯಾ ಸೆಹಗಲ್ (34) ಎಂದು ಗುರುತಿಸಲಾಗಿದೆ.
ಶನಿವಾರ ಮಧ್ಯಾಹ್ನ 3.50ಕ್ಕೆ ಕೆಎನ್‌ಕೆ ಮಾರ್ಗ ಪೊಲೀಸ್ ಠಾಣೆಗೆ ಒಂದು ಕರೆಬಂದಿತು. ಕೊಲೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಒಳಗೆ ಹೋಗಿ ನೋಡಿದಾಗ ಕುಸುಮ್ ಸಿನ್ಹಾ ಮತ್ತು ಪ್ರಿಯಾ ಅವರು ಶವಗಳು ಕೋಣೆಯೊಂದಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಕಂಡುಬಂದಿದೆ.
ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಹೆಸರು ಮೇಘ ಸಿನ್ಹಾ (30). ಈತ ಕುಸುಮ್ ಅವರ ಪುತ್ರ. ಆಗಸ್ಟ್ 28ರಂದು ನನ್ನ ತಾಯಿ, ಮೊಮ್ಮಗ ಚಿರಾಗ್ ಹುಟ್ಟುಹಬ್ಬವನ್ನು ಆಚರಿಸಲು ಪ್ರಿಯಾ ಮನೆಗೆ ಹೋದರು. ಸಮಾರಂಭದ ವೇಳೆ ಪ್ರಿಯಾ ಮತ್ತು ಆಕೆಯ ಪತಿ ಯೋಗೇಶ್ ನಡುವೆ ಉಡುಗೊರೆ ವಿಚಾರಕ್ಕೆ ಜಗಳವಾಯಿತು. ಗಲಾಟೆಯನ್ನು ಇತ್ಯರ್ಥ ಪಡಿಸಲು ನನ್ನ ತಾಯಿ, ಪ್ರಿಯಾ ಮನೆಯಲ್ಲೇ ಉಳಿದುಕೊಂಡರು ಎಂದು ಮೇಘ ಸಿನ್ಹಾ ಹೇಳಿಕೆ ನೀಡಿದ್ದಾಗಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ದಿನ ಮೇಘ ಅವರು ಸ್ಥಳದಲ್ಲಿ ಇರಲಿಲ್ಲ. ಆದರೆ, ಆಗಸ್ಟ್ 30 ರಂದು ತನ್ನ ತಾಯಿಗೆ ಮೇಘ ಕರೆ ಮಾಡಿದ್ದಾರೆ. ಎಷ್ಟೇ ಕರೆ ಮಾಡಿದರೂ ತಾಯಿ ಉತ್ತರಿಸದಿದ್ದಾಗ, ಮೇಘ ಅವರು ನೇರವಾಗಿ ಪ್ರಿಯಾ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಫ್ಲಾಟ್ ಹೊರಗಿನಿಂದ ಬಾಗಿಲು ಲಾಕ್ ಆಗಿರುವುದನ್ನು ನೋಡಿದ್ದಾರೆ. ಆದರೆ, ಬಾಗಿಲಿನ ಬಳಿ ರಕ್ತದ ಕಲೆಗಳಿರುವುದನ್ನು ನೋಡಿ, ಅನುಮಾನಗೊಂಡ ಮೇಘ, ತಕ್ಷಣ ಇತರೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ಲಾಕ್ ಒಡೆದು ಒಳಗೆ ಹೋಗಿ ನೋಡಿದಾಗ ತಾಯಿ ಕುಸುಮ್ ಮತ್ತು ಸಹೋದರಿ ಪ್ರಿಯಾಳ ಶವ ರೂಮ್ ಒಂದರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಮೇಘ ಶಾಕ್ ಆದರು ಯೋಗೇಶ್ ಸೆಹಗಲ್ನಿಂದಲೇ ಈ ಹತ್ಯೆ ನಡೆದಿದೆ ಎಂದು ಮೇಘ ಆರೋಪ ಮಾಡಿದ್ದಾರೆ. ಯೋಗೇಶ್ ಓರ್ವ ನಿರುದ್ಯೋಗಿಯಾಗಿದ್ದು, ನನ್ನ ತಾಯಿ ಮತ್ತು ಸಹೋದರಿಯನ್ನು ಕೊಂದು ಮಕ್ಕಳೊಂದಿಗೆ ಓಡಿ ಹೋಗಿದ್ದಾನೆ ಎಂದು ಮೇಘ ಅವರು ಆರೋಪ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಕೌಟುಂಬಿಕ ಕಲಹ ಕಾರಣ:
ಕೂಡಲೇ ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ಆರಂಭಿಸಿದ ಕೆಎನ್‌ಕೆ ಮಾರ್ಗ್ ಠಾಣಾ ಪೊಲೀಸರು, ಆರೋಪಿ ಯೋಗೇಶ್ನನ್ನು ಬಂಧಿಸಿದ್ದಾರೆ. ಆತನ ರಕ್ತದ ಕಲೆಯ ಬಟ್ಟೆಗಳು ಮತ್ತು ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಚಾಕುವನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಪ್ರಕಾರ, ಕೊಲೆಗೆ ಕೌಟುಂಬಿಕ ಕಲಹ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಅಪರಾಧ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.












